Advertisement

ರಾಯರ 351ನೇ ಆರಾಧನೆಗೆ ಚಾಲನೆ: ಆ. 12-ಪೂರ್ವಾರಾಧನೆ, 13-ಮಧ್ಯಾರಾಧನೆ, 14-ಉತ್ತಾರಾರಾಧನೆ

11:05 PM Aug 10, 2022 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಸಂಜೆ ಶ್ರೀ ಗುರು ರಾಯರ 351ನೇ ಆರಾಧನ ಮಹೋತ್ಸವದ ಅಂಗವಾಗಿ ಸಪ್ತರಾತ್ರೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರತೀರ್ಥರು ವಿಧ್ಯುಕ್ತವಾಗಿ ಚಾಲನೆ ನೀಡಿದರು.

Advertisement

ಶ್ರೀ ಮಠದ ಮುಂಭಾಗದಲ್ಲಿ ಶ್ರೀಗಳು ಗೋಪೂಜೆ, ಆಶ್ವ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿದರು. ಆರಾಧನೆ ಪ್ರಯುಕ್ತ ಶ್ರೀಮಠವನ್ನು ವಿದ್ಯುದ್ದೀಪಗಳಿಂದ, ಹೂಗಳಿಂದ ಅಲಂಕರಿಸಲಾಗಿದೆ.

ಮಧ್ವಮಾರ್ಗ ಲೋಕಾರ್ಪಣೆ
ಇದೇ ಮಠದ ಮುಂಭಾಗದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮಧ್ವಮಾರ್ಗವನ್ನು ಶ್ರೀಮಠದ ಪೀಠಾಧಿಪತಿಗಳು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದರು. ಮಧ್ವಮಾರ್ಗದ ಉಭಯ ಕಡೆ ಬೃಹತ್‌ ಗೋಡೆಗಳ ನಿರ್ಮಾಣ ಮಾಡಿದ್ದು, ಗೋಡೆಗಳ ಮೇಲೆ ಪೌರಾಣಿಕ ಸನ್ನಿವೇಶಗಳು, ರಾಯರ ಜೀವನ ಚರಿತ್ರೆ, ಶ್ರೀ ವಿಷ್ಣುವಿನ ಲೀಲೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ಮಧ್ವಮಾರ್ಗದಿಂದ ರಥಬೀದಿ ಕಂಗೊಳಿಸುತ್ತಿತ್ತು.

ಭಕ್ತರಿಗೆ ಸಕಲ ವ್ಯವಸ್ಥೆ
ಯೋಗೀಂದ್ರ ಸಭಾ ಮಂಟಪದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಗಳು ಚಾಲನೆ ನೀಡಿದರು. ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ಈ ಬಾರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಭಕ್ತರು ಪುಣ್ಯಸ್ನಾನಕ್ಕೆ ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಬ್ಯಾರಿಕೇಡ್‌ ಅಳವಡಿಸಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನದಿ ತೀರದಲ್ಲಿ ನೂರಾರು ಶವರ್‌ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ವಸತಿ, ಪ್ರಸಾದ, ಸ್ನಾನ, ಆರೋಗ್ಯ ಸೇರಿದಂತೆ ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿದ್ದು, ಆ. 12ರಂದು ಪೂರ್ವಾರಾಧನೆ, 13ರಂದು ಮಧ್ಯಾರಾಧನೆ ಹಾಗೂ 14ರಂದು ಉತ್ತಾರಾರಾಧನೆ ಜರಗಲಿದೆ ಎಂದು ಶ್ರೀಗಳು ಹೇಳಿದರು.

Advertisement

ಶ್ರೀಮಠದ ಪಂಡಿತರಾದ ಶ್ರೀ ರಾಜಾ ಗಿರಿಯಾಚಾರ್‌, ಸಂಸ್ಕೃತ ವಿದ್ಯಾಪೀಠ ಪಾಠಶಾಲೆಯ ವಾದಿರಾಜಾಚಾರ್‌, ವ್ಯವಸ್ಥಾಪಕರಾದ ಶ್ರೀನಿವಾಸಾಚಾರ್‌, ವೆಂಕಟೇಶ ಜೋಶಿ, ಛಲಪತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next