Advertisement

ಪ್ರವಾಹ ಹಾನಿ ಸೌಕರ್ಯಕ್ಕೆ 35ಕೋಟಿ ಪ್ರಸ್ತಾವನೆ

11:42 AM Aug 26, 2018 | |

ಮೈಸೂರು: ಕೇರಳ ಮತ್ತು ಕೊಡಗಿನಲ್ಲಿ ಸುರಿದ ಮಹಾ ಮಳೆಯಿಂದಾಗಿ ಮೈಸೂರು ಜಿಲ್ಲೆಯಲ್ಲಿ ಹಾನಿಗೀಡಾಗಿರುವ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಜಿಲ್ಲಾಡಳಿತ, ಸರ್ಕಾರಕ್ಕೆ 35 ಕೋಟಿ ರೂ. ಅನುದಾನ ಕೋರಿದೆ.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರು ಸಭೆ ನಡೆಸಿದ ವೇಳೆ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಈ ಪ್ರಸ್ತಾವನೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಅಂದಾಜು 1800 ಹೆಕ್ಟೇರ್‌ ಬೆಳೆಹಾನಿ, 260 ಮನೆಗಳಿಗೆ ಹಾನಿ ಸಂಭವಿಸಿದೆ. ಮಹಾಮಳೆಯಿಂದಾಗಿ ಕಪಿಲಾ ನದಿ ಉಕ್ಕಿ ಹರಿದ ಪರಿಣಾಮ ನಂಜನಗೂಡು ತಾಲೂಕಿನಲ್ಲಿ ನದಿ ಪಾತ್ರದ ಹಲವು ಗ್ರಾಮಗಳ ಜಮೀನುಗಳು ಜಲಾವೃತವಾಗಿದ್ದು, ಅತಿ ಹೆಚ್ಚು ಬೆಳೆ ನಷ್ಟ ಉಂಟಾಗಿದೆ.

ಪಿರಿಯಾಪಟ್ಟಣ ತಾಲೂಕಿನಲ್ಲಿ 144 ಮತ್ತು ಎಚ್‌.ಡಿ.ಕೋಟೆ ತಾಲೂಕಿನಲ್ಲಿ 116 ಮನೆಗಳು ಸೇರಿದಂತೆ ಒಟ್ಟು 260 ಮನೆಗಳು ಮಳೆ ಮತ್ತು ನದಿ ಪ್ರವಾಹದಿಂದ ಹಾಳಾಗಿದೆ. ನಂಜನಗೂಡು ಪಟ್ಟಣದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೂ ಯಾವುದೇ ಹಾನಿ ಉಂಟಾಗಿಲ್ಲ ಎಂದು ಮಾಹಿತಿ ನೀಡಿದರು. 

ಹಾನಿ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಮತ್ತು ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಪರಿಣಾಮ ಜಿಲ್ಲೆಗೂ ಆಗಿದೆ.

Advertisement

ಇದರಿಂದ  ಸರ್ಕಾರಿ ಆಸ್ತಿ, ಖಾಸಗಿ ಆಸ್ತಿ, ಬೆಳೆ ಹಾನಿ, ಮಾನವ ಮತ್ತು ಪ್ರಾಣಿಗಳ ಪ್ರಾಣ ಹಾನಿಗಳನ್ನು ಅಂದಾಜು ಮಾಡಲಾಗುತ್ತಿದೆ. ರಸ್ತೆ, ಸೇತುವೆ, ಕಲ್ವರ್ಟ್‌ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಣ ಬೇಕಾಗುತ್ತದೆ. ಪ್ರಕೃತಿ ವಿಕೋಪದಂತಹ ತುರ್ತು ಕಾಮಗಾರಿ ಮತ್ತು ಪರಿಹಾರ ನೀಡಲು ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 5 ಕೋಟಿ ರೂ.ಹಣವಿದ್ದು, ಯಾವುದೇ ರೀತಿ ಹಣದ ಕೊರತೆ ಇಲ್ಲ ಎಂದು ಹೇಳಿದರು. 

ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಸೇರಿ ಹಾನಿಗೀಡಾಗಿರುವ ಮೂಲಸೌಕರ್ಯಗಳ ಅಭಿವೃದ್ಧಿ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಲೋಕೋಪಯೋಗಿ ಇಲಾಖೆಯವರು ಹಾಳಾಗಿರುವ ರಸ್ತೆ, ಸೇತುವೆಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ. ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ವಿದ್ಯಾರ್ಥಿನಿಲಯಗಳ ಕಟ್ಟಡಗಳು ಹಾನಿಗೀಡಾಗಿದ್ದರೆ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌,  ಜಿಪಂ ಸಿಇಒ ಜ್ಯೋತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next