ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿನ ಉಪ ತಳಿ ಜೆಎನ್.1 ಪತ್ತೆಯು ಆತಂಕ ಮೂಡಿಸಿರುವಂತೆಯೇ ರವಿವಾರ ದೇಶಾದ್ಯಂತ 335 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,701ಕ್ಕೇರಿಕೆಯಾಗಿದೆ. ಈ ಪೈಕಿ 1,523 ಪ್ರಕರಣಗಳು ಕೇರಳದ್ದೇ ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಶನಿವಾರದಿಂದ ರವಿವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ನಾಲ್ವರು ಮತ್ತು ಉತ್ತರಪ್ರದೇಶದಲ್ಲಿ ಒಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ, ಜೆಎನ್.1 ಉಪತಳಿ ಬಗ್ಗೆ ಆತಂಕ ಪಡಬೇಕಾಗಿಲ್ಲ. ಸೋಂಕಿತ ವೃದ್ಧೆಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಕಾಯಿಲೆಗಳಿಂದ ಅವರು ಬಳಲುತ್ತಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಕೇರಳದ ಆರೋಗ್ಯ ವ್ಯವಸ್ಥೆಯು ಅಲರ್ಟ್ ಆಗಿರುವ ಕಾರಣ ಬೇಗನೆ ಈ ತಳಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಸಿಂಗಾಪುರದಲ್ಲಿ ಜೆಎನ್.1 ಹಾವಳಿ
ಸಿಂಗಾಪುರದಲ್ಲಿ ಹೊಸ ಉಪತಳಿ ಜೆಎನ್.1 ಕೇಸುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಜನರಿಗೆ ಹಲವು ಸೂಚನೆಗಳನ್ನು ನೀಡಿದೆ. ಭಾರತೀಯ ಪ್ರಯಾಣಿಕರು ಸೇರಿದಂತೆ ಎಲ್ಲರಿಗೂ ಪ್ರಯಾಣದ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ಪ್ರಕಟಿಸಿದೆ. ಡಿ.3-9ರವರೆಗೆ 56,043 ಮಂದಿಗೆ ಸೋಂಕು ದೃಢಪಟ್ಟಿದೆ. ಅದಕ್ಕಿಂತಲೂ ಹಿಂದಿನ ವಾರ ಈ ಸಂಖ್ಯೆ 32,035 ಆಗಿತ್ತು.