ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸುಮಾರು 3307 ವಿವಿಧ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಶಿವರಾಮ ಹೆಬ್ಟಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 255 ಚಾಲಕ, 413 ನಿರ್ವಾಹಕ, 259 ನಿರ್ವಾಹಕ/ ಚಾಲಕ, 80 ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹೊಸದಾಗಿ ಮೂರು ಘಟಕಗಳ ಆರಂಭಕ್ಕೆ ಸಂಸ್ಥೆಯ 79ನೇ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆತಿದೆ. ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಹುಕ್ಕೇರಿ, ಉತ್ತರ ಕನ್ನಡ ವಿಭಾಗದಲ್ಲಿ ಮುಂಡಗೋಡ ಹಾಗೂ ಗದಗ ವಿಭಾಗದಲ್ಲಿ ಶಿರಹಟ್ಟಿಯಲ್ಲಿ ಹೊಸ ಘಟಕ, ಸವದತ್ತಿಯಲ್ಲಿರುವ 49 ವರ್ಷದ ಬಸ್ ನಿಲ್ದಾಣ ತೆರವುಗೊಳಿಸಿ 4 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ, ಬೈಲಹೊಂಗಲದಲ್ಲಿ 5 ಕೋಟಿ ವೆಚ್ಚದಲ್ಲಿ ನಿಲ್ದಾಣ ಹಾಗೂ ಹುನಗುಂದ, ಇಳಕಲ್ಲ, ಅಮೀನಗಡ ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ತಲಾ 1.5 ಕೋಟಿ ಮತ್ತು ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.
ಸಂಸ್ಥೆಯನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಚರ್ಚೆ ಮಾಡಿದ ಪರಿಣಾಮ 15 ದಿನದೊಳಗೆ ಸಾರಿಗೆ, ಹಣಕಾಸು ಇಲಾಖೆಯ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ಮುಖ್ಯಮಂತಿಗಳು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳಿಂದ ಸಂಸ್ಥೆಗೆ ಒಂದಿಷ್ಟು ನೆರವು ದೊರೆಯುವ ಆಶಾಭಾವನೆಯಿದೆ. ಸಂಸ್ಥೆ ಆರ್ಥಿಕ ಸುಧಾರಣೆ ನಿಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ಸಂಸ್ಥೆಯ ಆಸ್ತಿ ಸದ್ಬಳಕೆ ಮಾಡಿಕೊಳ್ಳಲು ಚಿಂತಿಸಲಾಗಿದೆ. ಇದಕ್ಕಾಗಿ ತಾಂತ್ರಿಕ ಸಮಿತಿ ನೇಮಿಸಿ ವರದಿ ಪಡೆಯಲು ಟೆಂಡರ್ ಕರೆಯಲಾಗುವುದು. ಗೋಕುಲ ರಸ್ತೆಯಲ್ಲಿ ಸುಮಾರು 165 ಎಕರೆ ಸಂಸ್ಥೆಯ ಆಸ್ತಿಯಿದ್ದು, ಇದರಲ್ಲಿ 25 ಎಕರೆ ಖಾಲಿಯಿದೆ. ಇದರಂತೆ ಇತರೆ ನಗರದಲ್ಲಿರುವ ಆಸ್ತಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಬಾಕಿಯೇ ದೊಡ್ಡ ಹೊರೆ: ವಿದ್ಯಾರ್ಥಿಗಳ ರಿಯಾಯಿತಿ ಬಸ್‌ಪಾಸ್‌ಗಳ ಬಾಕಿ ಹಣ ಸರ್ಕಾರದಿಂದ ಬಾರದಿರುವುದು ಆರ್ಥಿಕ ಸಮಸ್ಯೆಗೆ ಕಾರಣವಾಗಿದೆ. 2014ರಿಂದ 2019ರವರೆಗೆ ಸುಮಾರು 751 ಕೋಟಿ ರೂ. ಬಾಕಿ ಬರಬೇಕಾಗಿದೆ. ಸಂಸ್ಥೆ ಹಾಲಿ ಹಾಗೂ ನಿವೃತ್ತ ನೌಕರರ ವಿವಿಧ ಸೌಲಭ್ಯಕ್ಕೆ ಸುಮಾರು 335 ಕೋಟಿ ಪಾವತಿ ಮಾಡಬೇಕಿದೆ. ಬಿಆರ್‌ಟಿಎಸ್ ಉದ್ಘಾಟನೆ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿ, ಸಾರಿಗೆ ಮಂತ್ರಿ, ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ರಾಷ್ಟ್ರಪತಿಗಳು ಈ ಯೋಜನೆಗೆ ಚಾಲನೆ ನೀಡುವುದಾದರೆ ಅದಕ್ಕಿಂತ ದೊಡ್ಡ ಅದೃಷ್ಟ ಬೇರೆ ಇಲ್ಲ. ಅವರನ್ನು ತುಂಬು ಹೃದಯದಿಂದ ಸ್ವಾಗತ ಮಾಡುವುದಾಗಿ ತಿಳಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 151 ಸಿಬ್ಬಂದಿ ಅಮಾನತು ಮಾಡಲಾಗಿದೆ. ಈ ಪ್ರಕರಣದ ತನಿಖೆಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮಾಡುತ್ತಿದ್ದಾರೆ ಎಂದರು.