ರಾಯಬಾಗ: ಕರ್ನಾಟಕದಲ್ಲಿ ಶೇ.21ರಷ್ಟಿದ್ದ ಅರಣ್ಯಪ್ರದೇಶ ನಾವು ಅಧಿ ಕಾರಕ್ಕೆ ಬಂದ ನಂತರ ಶೇ.33ರಷ್ಟು ವಿಸ್ತರಿಸಲಾಗಿದೆ. ದೇಶದಲ್ಲಿಯೇ ಅತ್ಯಂತ ಸಮೃದ್ಧ ಅರಣ್ಯಪ್ರದೇಶ ಮತ್ತು ಪ್ರಾಣಿ ಸಂಕುಲ ಹೊಂದಿರುವ ರಾಜ್ಯ ನಮ್ಮದು ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.
ಪಟ್ಟಣದಲ್ಲಿ ಅರಣ್ಯ ಇಲಾಖೆ ಅನುದಾನದಲ್ಲಿ 30 ಲಕ್ಷ ವೆಚ್ಚದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯ ಅಧಿಕಾರಿಗಳ ಕಚೇರಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರಾಯಬಾಗ ತಾಲೂಕಿನಲ್ಲಿ ಈಗಾಗಲೇ 3500 ಹೆಕ್ಟೇರ್ ಅರಣ್ಯ ಪ್ರದೇಶವಿದೆ.
ಕಂದಾಯ ಇಲಾಖೆಯ ಖಾಲಿ ಇರುವ ಗೈರಾಣ ಜಾಗ ಅರಣ್ಯ ಇಲಾಖೆಗೆ ನೀಡಿದರೆ ಅರಣ್ಯ ಪ್ರದೇಶ ಇನ್ನೂ ಹೆಚ್ಚು ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು. ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ಕ್ಷೇತ್ರದಲ್ಲಿ ನೀರಾವರಿ ಮತ್ತು ಅರಣ್ಯ ಪ್ರದೇಶ ಅಭಿವೃದ್ಧಿಪಡಿಸಿ ಉದ್ಯಾನವನ ಮಾಡಲು ಹೆಚ್ಚಿನ ಅನುದಾನ ಕ್ಷೇತ್ರಕ್ಕೆ ಬಿಡುಗಡೆ ಮಾಡಬೇಕು. ಈ ಭಾಗದ ರೈತರು ಶ್ರೀಗಂಧ ಮರ ಬೆಳೆಸಲು ಪ್ರೋತ್ಸಾಹಿಸಲು ರೈತರಿಗೆ ಉಚಿತ ಸಸಿ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಸಾಲಿಮಠ, ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂತೋನಿ ಮರಿಯಪ್ಪ, ರಾಯಬಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ, ರಾಯಬಾಗ ವಲಯ ಅರಣ್ಯಾ ಧಿಕಾರಿ ಸಂತೋಷ ಸುಂಬಳಿ, ಬಿಜೆಪಿ ರಾಯಬಾಗ ಘಟಕದ ಅಧ್ಯಕ್ಷ ಬಸವರಾಜ ಡೊಣವಾಡೆ, ಸದಾನಂದ ಹಳಿಂಗಳಿ, ಸದಾಶಿವ ಘೋರ್ಪಡೆ, ಗಂಗಾಧರ ಮೈಶಾಳೆ, ಆರ್.ಬಿ. ಶಹಾರೆ, ಅರ್ಜುನ ಗೊಂಡೆ, ಸುರೇಶ ಕೊಕಾಟೆ, ಸಂಗಣ್ಣ ದತ್ತವಾಡೆ ಸೇರಿದಂತೆ ಇತರರಿದ್ದರು.
ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಶ್ರೀಗಂಧ ಮರ ಸೇರಿದಂತೆ ಇನ್ನು 62 ಜಾತಿಯ ಮರ ರೈತರು ಬೆಳೆಯಲು ಅನುಕೂಲವಾಗಲು ಸರಳೀಕೃತ ಮಾಡಿ ಅವುಗಳನ್ನು ಅರಣ್ಯ ಇಲಾಖೆಯಿಂದ ಬೇರ್ಪಡಿಸಿ ತೋಟಗಾರಿಕೆ ಇಲಾಖೆಗೆ ಸುರ್ಪದಿಗೆ ನೀಡಲಾಗುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದ ಅವರು, ಶಾಸಕ ದುರ್ಯೋಧನ ಐಹೊಳೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ರಾಯಬಾಗ ಮತಕ್ಷೇತ್ರದ 90 ಕೆರೆ ತುಂಬಿಸುವ ಯೋಜನೆ ಕೈಗೊಂಡಿದ್ದು ಅದು ಪ್ರಗತಿಯಲ್ಲಿದೆ.
ಉಮೇಶ ಕತ್ತಿ, ಸಚಿವ