Advertisement

ಡಿಸ್ಟಲರಿ ಕಾರ್ಖಾನೆಯಿಂದ 33 ಲಕ್ಷ ತೆರಿಗೆ ಬಾಕಿ: ಕಿರಕಿ

06:55 PM Mar 12, 2022 | Team Udayavani |

ಬಾಗಲಕೋಟೆ: ಮುಧೋಳ ತಾಲೂಕಿನ ಸೋರಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಸ್ಟಲರಿ ಕಾರ್ಖಾನೆ, ಕಳೆದ ಏಳು ವರ್ಷಗಳಿಂದ ಒಟ್ಟು 33 ಲಕ್ಷ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು ಆರೋಪಿಸಿದರು.

Advertisement

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಕಿರಕಿ ಹಾಗೂ ಸದಸ್ಯರು ಮಾತನಾಡಿ, ತೆರಿಗೆ ಬಾಕಿ ಕುರಿತು ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದೇವೆ. ಕೇವಲ 1.30 ಲಕ್ಷ ಮೊತ್ತದ ಚೆಕ್‌ ನೀಡಿದ್ದರು. ನಾವು ಅದನ್ನು ಪಡೆದಿಲ್ಲ. ಹಿಂಬರಹ ಬರೆದು ಮರಳಿ ಕಳುಹಿಸಿದ್ದೇವೆ. ಅದನ್ನೂ ಪುನಃ ಸ್ವೀಕರಿಸಿಲ್ಲ ಎಂದು ದೂರಿದರು.

ಈ ಕುರಿತು ಸಚಿವ ಮುರುಗೇಶ ನಿರಾಣಿ ಅವರ ಗಮನಕ್ಕೆ ತರಲಾಗಿದೆ. ಮುಖ್ಯವಾಗಿ ಮುಧೋಳ ತಾಪಂ.ಇಒ ಅವರಿಗೂ ತಿಳಿಸಿದ್ದೇವೆ. ಒಟ್ಟು 33.31 ಲಕ್ಷ ರೂ. ತೆರಿಗೆ ಬಾಕಿ ಕೊಡಬೇಕಿದೆ. ಗ್ರಾಪಂನಿಂದ ನೋಟಿಸ್‌ ಕಳುಹಿಸಿದರೂ, ಅದನ್ನು ಸ್ವೀಕರಿಸದೇ ಮರಳಿ ಕಳುಹಿಸಿದ್ದಾರೆ. ಈ ಹಿಂದೆ ಈ ಕಾರ್ಖಾನೆ ಕುಳಲಿ ಗ್ರಾಪಂ ವ್ಯಾಪ್ತಿಯಲ್ಲಿತ್ತು. ಆಗ ಗ್ರಾ.ಪಂ. ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡು 1.63 ಲಕ್ಷ ರೂ. ತೆರಿಗೆ ಪಾವತಿಸಿದ್ದರು. ಗ್ರಾಪಂ ಪುನರ್‌ವಿಂಗಡಣೆಯ ಬಳಿಕ ಈ ಕಾರ್ಖಾನೆಯನ್ನು ಸೋರಗಾವಿ ಗ್ರಾಪಂಗೆ ಸೇರಿಸಲಾಗಿದೆ.

ಅಂದಿನಿಂದ ಈ ವರೆಗೆ ತೆರಿಗೆ ಪಾವತಿಸಿಲ್ಲ ಎಂದರು. ಗ್ರಾ.ಪಂ. ಉಪಾಧ್ಯಕ್ಷೆ ಮಹಾದೇವಿ, ಸದಸ್ಯರಾದ ಸುಭಾಸ ಅಡವಿ, ವಿನೋದ ಅಡವಿ, ಸಂಗನಗೌಡ ಪಾಟೀಲ, ರುದ್ರಪ್ಪ ಅಡವಿ, ಹೊಳಬಸು ಬಾಲಮಸಿ ಇದ್ದರು.

ಕಾರ್ಖಾನೆ ಸ್ಪಷ್ಟನೆ
ಈ ಕುರಿತು ಕಾರ್ಖಾನೆಯ ವ್ಯವಸ್ಥಾಪಕ ಬಸವರಾಜ ಶೆಲ್ಲಿಕೇರಿ ಸ್ಪಷ್ಟನೆ ನೀಡಿದ್ದು, ಸೋರಗಾವಿ ಗ್ರಾ.ಪಂ.ಗೆ ಯಾವುದೇ ರೀತಿಯ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ. 2020-21ನೇ ಸಾಲಿನವರೆಗೆ ನಿಯಮಾನುಸಾರ ಚೆಕ್‌ ಮೂಲಕ ತೆರಿಗೆ ಪಾವತಿ ಮಾಡಲಾಗಿದೆ. ಅಲ್ಲದೇ ಪಂಚಾಯಿತಿ ಅಧಿಕಾರಿಗಳು ನಿಯಮಬಾಹಿರವಾಗಿ ಹೆಚ್ಚು ತೆರಿಗೆ ಆಕರಣೆ ಮಾಡಿದ್ದಾರೆ. ಈ ವಿಷಯವನ್ನು ಪಂಚಾಯಿತಿ ಅಧಿಕಾರಿಗಳಿಗೆ ಸಮಕ್ಷಮ ಹಾಗೂ ಲಿಖೀತವಾಗಿ ಮನವರಿಕೆ ಮಾಡಿಕೊಡಲಾಗಿದೆ. ಸಕ್ಕರೆ, ಕೃಷಿ ಆಧಾರಿತ ಮಧ್ಯಮ ಕೈಗಾರಿಕೆಯಾಗಿದ್ದು, ಈ ನಿಯಮದಂತೆ ತೆರಿಗೆ ಪಾವತಿ ಮಾಡಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next