Advertisement

ಚಾ.ನಗರ: 33 ಬಾಲ್ಯವಿವಾಹ ತಡೆ

03:07 PM Sep 21, 2020 | Suhan S |

ಚಾಮರಾಜನಗರ: ಬಡತನ, ಅರಿವಿನ ಕೊರತೆ, ಮಕ್ಕಳು ದಾರಿ ತಪ್ಪುವ ಆತಂಕದಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಮುಂದಾದಪ್ರಕರಣಗಳು ಆಗಾಗ ನಡೆಯುತ್ತಿವೆ. ಜಿಲ್ಲೆಯಲ್ಲಿ ಈ ವರ್ಷದ ಏಪ್ರಿಲ್‌ ನಿಂದ ಆಗಸ್ಟ್‌ವರೆಗೆ 33 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪೊಲೀಸರ ನೆರವಿನಿಂದ ತಡೆದಿದೆ.

Advertisement

ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದ 33 ಪ್ರಕರಣಗಳಲ್ಲಿ, ಚಾಮರಾಜನಗರ ತಾಲೂಕಿನಿಂದ9, ಸಂತೆಮರಹಳ್ಳಿ ವ್ಯಾಪ್ತಿಯಲ್ಲಿ7, ಕೊಳ್ಳೇಗಾಲ ತಾಲೂಕಿನಲ್ಲಿ 9, ಗುಂಡ್ಲುಪೇಟೆ ತಾಲೂಕಿನಲ್ಲಿ 5,ಯಳಂದೂರು ತಾಲೂಕಿನಲ್ಲಿ 3 ಪ್ರಕರಣಗಳನ್ನು ತಡೆ ಹಿಡಿಯಲಾಗಿದೆ.

ಇದೇ ಅವಧಿಯಲ್ಲಿ ಯಳಂದೂರು ತಾಲೂಕಿನಲ್ಲಿ 1 ಬಾಲ್ಯ ವಿವಾಹ ಪ್ರಕರಣ ನಡೆದಿದ್ದು ಈ ಬಗ್ಗೆ ಪೋಷಕರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಜಿಲ್ಲೆಯಕೆಲವುಹಿಂದುಳಿದ ಸಮುದಾಯಗಳಲ್ಲಿ  ಅಲ್ಲಲ್ಲಿ ಬೆಳಕಿಗೆ ಬರುತ್ತಿರುತ್ತವೆ. ಹೆಣ್ಣು ಮಕ್ಕಳು ಅರಿಯದ ವಯಸ್ಸಿನಲ್ಲಿ ಸಲುಗೆ ಬೆಳೆಸಿ ಕೊಂಡು ಯಾರನ್ನಾದರೂ ಮದುವೆಯಾಗಿ ಬಿಡ ಬಹುದೆಂಬ ಭಯಕ್ಕೆ, ಅವರಿಗೆ ಸೂಕ್ತ ಸಂಬಂಧ ಕಂಡ ಬಂದರೆ ಕಾಯುವುದು ಬೇಡವೆಂದು ಮದುವೆ ಮಾಡಲಾಗುತ್ತದೆ. ಬಾಲ್ಯ ವಿವಾಹಕ್ಕೆ ಮೂಲ ಕಾರಣ ಬಡತನ. ಬಡತನದಕಾರಣದಿಂದ ಸೂಕ್ತ ಶಿಕ್ಷಣ ಪೋಷಕರಿಗಿರುವುದಿಲ್ಲ. ಮಗಳನ್ನು ಆದಷ್ಟು ಬೇಗ ಗಂಡನ ಮನೆಗೆ ಕಳುಹಿಸಿದರೆ ತಾವು ನಿರಾಳ ಎಂಬ ಭಾವನೆ ಅಪ್ರಾಪ್ತ ವಯಸ್ಸಿಗೇ ಮದುವೆ ಮಾಡಲು ಪ್ರೇರಣೆಯಾಗುತ್ತದೆ.ಇದಲ್ಲದೇಹೆಣ್ಣುಮಕ್ಕಳುಆಕರ್ಷಣೆಯನ್ನೇ ಪ್ರೀತಿಯೆಂದು ತಿಳಿದು ವಿವಾಹವಾಗುವ ಪ್ರಸಂಗಗಳೂ ನಡೆಯುತ್ತಿರುತ್ತವೆ.

ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಲೇ ಇವೆ.ಕಾನೂನು ಸೇವಾ ಪ್ರಾಧಿಕಾರ ಸಹ ಹಿಂದುಳಿದ ಪ್ರದೇಶಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಬಾಲ್ಯ ವಿವಾಹ ನಡೆಯುತ್ತದೆ ಎಂಬುದನ್ನು ಅರಿತು ಆ ಬಾಲಕಿಯೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿರುವ ಪ್ರಕರಣಗಳು ನಡೆದಿವೆ. ಇಲ್ಲವಾದರೆ ಮದುವೆಯಾಗಲಿರುವ ಬಾಲಕಿಯ ಗೆಳತಿಯರು, ಶಿಕ್ಷಕರು ಸಹಾಯವಾಣಿಗೆ ಕರೆ ಮಾಡಿ ಬಾಲ್ಯ ವಿವಾಹ ನಡೆಯುವುದನ್ನು ತಪ್ಪಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಪೊಲೀಸರನೆರವಿನಿಂದ ಬಾಲ್ಯ ವಿವಾಹ ನಡೆಸಲು ಸಿದ್ಧತೆ ನಡೆಸಿರುವ ಪ್ರಕರಣಗಳು, ವಿವಾಹ ನಡೆಯುವ ಹಂತದಲ್ಲಿ ಸ್ಥಳಕ್ಕೆ ಹೋಗಿ ಮದುವೆ ನಿಲ್ಲಿಸಿದ್ದೇವೆ. ಒಂದು ಪ್ರಕರಣದಲ್ಲಿ ಮದುವೆಯಾಗಲಿರುವ ಹುಡುಗಿಗೆ 18 ವರ್ಷ ತುಂಬಲು 2 ತಿಂಗಳು ಮಾತ್ರ ಇತ್ತು ಅಂಥ ಪ್ರಕರಣದಲ್ಲೂ ವಿವಾಹ ತಡೆ ಹಿಡಿಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ಉದಯವಾಣಿಗೆ ತಿಳಿಸಿದರು.

ಕೆಲವೊಮ್ಮೆ ಛತ್ರದಲ್ಲೇ ಮದುವೆ ನಿಗದಿಯಾಗಿರುತ್ತದೆ. ವಿಷಯ ತಿಳಿದು ಸ್ಥಳಕ್ಕೆ ಹೋದಾಗ ಬಹಳ ರಾದ್ಧಾಂತವೇ ನಡೆಯುತ್ತದೆ. ವಧು ವರರ ಕಡೆಯವರು ನಮಗೆ ಹಿಡಿಶಾಪ ಹಾಕುತ್ತಾರೆ. ಜಗಳ ಮಾಡುತ್ತಾರೆ. ಆಕ್ರೋಶದಿಂದ ಹಲ್ಲೆ ನಡೆಸಲು ಸಹ ಮುಂದಾಗುತ್ತಾರೆ ಎಂದು ಅವರು ತಿಳಿಸಿದರು.

Advertisement

ಸಹಾಯವಾಣಿ: ತಂದೆ ತಾಯಿಗಳು ಮಕ್ಕಳಿಗೆ ಮದುವೆ ಮಾಡಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಶಾಲೆ ಬಿಡಿಸಬೇಡಿ. ಶಾಲಾ ಕಾಲೇಜಿಗೆ ತೆರಳಿ ಮಕ್ಕಳ ಚಟುವಟಿಕೆಗಳ ಬಗ್ಗೆ ವಿಚಾರಿಸಿ, ಮಕ್ಕಳ ಬಗ್ಗೆ ಗಮನ ಕೊಡಿ. ಅವರ ಕಷ್ಟ ಸುಖಗಳನ್ನು ವಿಚಾರಿಸಿ. ಬಾಲ್ಯ ವಿವಾಹ ನಡೆಯುವ ಸಿದ್ಧತೆ ಇದ್ದರೆ 24×7 ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಎಂದು ಅವರು ಮನವಿ ಮಾಡಿದರು.

ಉಪ್ಪಾರ ಸಮುದಾಯದಲ್ಲಿ ಬಾಲ್ಯ ವಿವಾಹ ಹೆಚ್ಚು :  ಜಿಲ್ಲೆಯ ಉಪ್ಪಾರ ಸಮುದಾಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತವೆ. ಈ ಸಮುದಾಯದಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇರುವುದು ಇದಕ್ಕೆಕಾರಣ. ಇತ್ತೀಚಿನ ವರ್ಷಗಳಲ್ಲಿ ಈ ಸಮುದಾಯದಲ್ಲಿ ಬಾಲ್ಯ ವಿವಾಹ ಗಣನೀಯ ಪ್ರಮಾಣದಲ್ಲಿಕಡಿಮೆಯಾಗುತ್ತಿದೆ. ಆ ಸಮುದಾಯದವರೇ  ಶಾಸಕರಾಗಿದ್ದಾರೆ. ಗಡಿ ಮನೆ,ಕಟ್ಟೆ ಮನೆ ಮುಖಂಡರ ಸಭೆಗಳನ್ನು ನಡೆಸಿ ಬಾಲ್ಯ ವಿವಾಹ ನಡೆಸದಂತೆ ಸಲಹೆ, ಎಚ್ಚರಿಕೆ ನೀಡಲಾಗಿದೆ.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next