Advertisement

ತಾಯ್ನಾಡಿಗೆ ಮರಳಿದ 326 ಕನ್ನಡಿಗರು

09:23 AM May 12, 2020 | Lakshmi GovindaRaj |

ಬೆಂಗಳೂರು/ದೇವನಹಳ್ಳಿ: ಕೊನೆಗೂ ತಾಯ್ನಾಡಿಗೆ ಬಂದಿಳಿದ ಅನಿವಾಸಿ ಕನ್ನಡಿಗರು, ವಿಕ್ಟರಿ ಚಿಹ್ನೆ ತೋರಿಸಿ ಸಂಭ್ರಮ, ಆತಂಕದ ನಡುವೆಯೂ ಸೆಲ್ಫಿ-ಫೋಟೋ ಕ್ಲಿಕ್ಕಿಸಿಕೊಳ್ಳುವ ಆತುರ, ಚಪ್ಪಾಳೆ ಮೂಲಕ ಬರಮಾಡಿಕೊಂಡ  ನಿಲ್ದಾಣದ ಸಿಬ್ಬಂದಿ, ಸಂಭ್ರಮದ ಕೆಲ ಹೊತ್ತಿನಲ್ಲೇ ಕ್ವಾರಂಟೈನ್‌ ಗೊಳಗಾದ ಕನ್ನಡಿಗರು…! – ಲಂಡನ್‌ನಿಂದ ದೆಹಲಿ ಮಾರ್ಗವಾಗಿ ಏರ್‌ ಇಂಡಿಯಾ ವಿಮಾನ (ಸಂಖ್ಯೆ: ಎಐ 803)ದಲ್ಲಿಸೋಮವಾರ ಬೆಳಗಿನ ಜಾವ 4.45ಕ್ಕೆ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 326 ಅನಿವಾಸಿ ಕನ್ನಡಿಗರು ಬಂದಿಳಿದಾಗ ಕಂಡುಬಂದ ದೃಶ್ಯಗಳಿವು.

Advertisement

ತಾಯ್ನಾಡಿಗೆ ಬರಲಾಗದೆ ಪರದಾಡುತ್ತಿದ್ದಕನ್ನಡಿಗರಿಗೆ ಒಂದೂವರೆ ತಿಂಗಳ ನಂತರ ಈ ಭಾಗ್ಯ ಸಿಕ್ಕಿತು. ಸುರಕ್ಷಿತವಾಗಿ ಎಲ್ಲ ಅನಿವಾಸಿ ಕನ್ನಡಿಗರು ಬಂದಿಳಿದರು. ಕೊರೊನಾ ಸೋಂಕಿನ ಭೀತಿ ನಡುವೆಯೂ ತಮ್ಮವರನ್ನು ಅತ್ಯಂತ ಸಂಭ್ರಮದಿಂದ ನಿಲ್ದಾಣದಲ್ಲಿದ್ದ ಸಿಬ್ಬಂದಿ ಸ್ವಾಗತಕೋರಿಬರಮಾಡಿಕೊಂಡರು. ಪ್ರಯಾಣಿಕರು  ನಿಲ್ದಾಣದಿಂದ ಹೊರಬರುವ ಪ್ರವೇಶದ್ವಾರದಿಂದ ಹಿಡಿದು ಬಸ್‌ ನಿಲುಗಡೆ ಸ್ಥಳದವರೆಗೂ ಬ್ಯಾರಿಕೇಡ್‌ ಹಾಕಲಾಗಿತ್ತು. ಹೆಜ್ಜೆ-ಹೆಜ್ಜೆಗೂ ಕಣ್ಗಾವಲು, ಸಾಧ್ಯವಾದಷ್ಟು ಟಚ್‌ಪಾಯಿಂಟ್‌ಗಳನ್ನು ಕಡಿಮೆ ಮಾಡಲಾಗಿತ್ತು. ಚೆಕ್‌ ಔಟ್‌  ಪ್ರಕ್ರಿಯೆ ಕೂಡ ತ್ವರಿತವಾಗಿತ್ತು. ಕೆಲವೇ ನಿಮಿಷಗಳಲ್ಲಿ ಎಲ್ಲ ಪ್ರಯಾಣಿಕರು ಕ್ವಾರಂಟೈನ್‌ಗೆ ನಿಗದಿಪಡಿಸಿದ್ದ ಹೋಟೆಲ್‌ಗ‌ಳತ್ತ ಪ್ರಯಾಣಿಸಿದರು.

ಏನೇನು ಪರೀಕ್ಷೆ?: ಬೆಂಗಳೂರು ನಗರದ ವಿವಿಧ ಹೋಟೆಲ್‌ ಮತ್ತು ರೆಸಾರ್ಟ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ತಮ್ಮ ಕುಟುಂಬಗಳನ್ನು ಕೂಡಿಕೊಳ್ಳಲಿದ್ದಾರೆ. ಥರ್ಮಲ್‌ ಸ್ಕ್ರೀನಿಂಗ್‌, ತೀವ್ರಉಸಿರಾಟದ ಸಮಸ್ಯೆ ತಿಳಿಯಲು ಆಕ್ಸಿಜನ್‌ ಸ್ಯಾಚುರೇಷನ್‌ ಪರೀಕ್ಷೆ  ನಡೆಸಲಾಯಿತು. ಈ ವೇಳೆ ಯಾರಲ್ಲೂ ಸಮಸ್ಯೆ ಕಂಡುಬಂದಿಲ್ಲ.

ನಂತರ  ಅನಿವಾಸಿ ಕನ್ನಡಿಗರ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ, ಆರೋಗ್ಯ ಇಲಾಖೆಸಿಬ್ಬಂದಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಹಲವು  ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಎಲ್ಲರಿಗೂ ರಕ್ಷಣಾ ಕವಚ ನೀಡಲಾಗಿತ್ತು.ಮೊದಲ ಹಂತದಲ್ಲಿ ಬಂದಿಳಿದವರೆಲ್ಲರನ್ನೂ ನಗರದ ತಾಜ್‌ ವಿವಾಂತ, ಎಫ್‌ಎಬಿ ಲೆಮನ್‌ಟ್ರಿ ಹೋಟೆಲ್‌ಗ‌ಳಲ್ಲಿ ಕ್ವಾರಂಟೈನ್‌  ಮಾಡಲಾಗಿದೆ.

ಈ ಹೊಟೇಲ್‌ನಲ್ಲಿ ದಿನಕ್ಕೆ ಕೊಠಡಿಯೊಂದಕ್ಕೆ 4,100 ಬಾಡಿಗೆ ನಿಗದಿ ಮಾಡಲಾಗಿದೆ. ಲಂಡನ್‌ನಿಂದಬೆಂಗಳೂರಿಗೆ ಬರಲು ವಿಮಾನ ಪ್ರಯಾಣ ವೆಚ್ಚ ಒಬ್ಬರಿಗೆ 55 ಸಾವಿರ, ಪ್ರಯಾಣ ಹಾಗೂ ಹೋಟೆಲ್‌ ವೆಚ್ಚವನ್ನು  ಪ್ರಯಾಣಿಕರೇ ಭರಿಸಬೇಕು. ಕ್ವಾರಂಟೈನ್‌ ಅವಧಿಯಲ್ಲಿ ಒಬ್ಬ ವ್ಯಕ್ತಿ 57,400 ರೂ. ವೆಚ್ಚ ಭರಿಸಬೇಕು ಎಂದು ಮಾಹಿತಿಯಲ್ಲಿ ನಗರ ಜಿಲ್ಲಾಡಳಿತ ತಿಳಿಸಿದೆ. ಪಂಚತಾರ ಹೋಟೆಲ್‌ಗ‌ಳು ಒಂದು ದಿನಕ್ಕೆ ಒಬ್ಬರಂತೆ 3 ಸಾವಿರ ಶುಲ್ಕ  ನಿಗದಿಗೊಳಿಸಿದೆ. ಉಳಿದ ಸ್ಟಾರ್‌ ಹೋಟೆಲ್‌ಗ‌ಳು ಒಬ್ಬರು ಒಂದು ಕೊಠಡಿಗೆ 1,850 ರೂ. ದಿನಕ್ಕೆ, ಸಾಮಾನ್ಯ ಹೋಟೆಲ್‌ಗ‌ಳು ಕೊಠಡಿಗೆ 900 ರೂ.ರಂತೆ ನಿಗದಿಪಡಿಸಲಾಗಿದೆ.

Advertisement

ಯಾಕೆ ಹೋಟೆಲ್‌ ಕ್ವಾರಂಟೈನ್‌?: ಅನಿವಾಸಿ ಭಾರತೀಯರನ್ನು ಈ ಮೊದಲು ಹೋಂ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಆದರೆ, ಹೋಂ ಕ್ವಾರಂಟೈನ್‌ ಆದವರು ನಿಯಮ ಉಲ್ಲಂಘನೆ ಮಾಡಿ ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಿದ್ದರು. ಅಲ್ಲದೆ, ಹೋಂ ಕ್ವಾರಂಟೈನ್‌ ಆದವರಲ್ಲಿ  ಕೊರೊನಾ ಸೋಂಕು ದೃಢಪಟ್ಟರೆ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನೂ ಕ್ವಾರಂಟೈನ್‌ ಮಾಡುವುದು ಹಾಗೂ ಮಾಹಿತಿ ಕಲೆ ಹಾಕುವುದು ಸವಾಲಿನ  ಕೆಲಸವಾಗಿತ್ತು. ಅಲ್ಲದೆ, ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾ ಗಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್‌ ಕ್ವಾರಂಟೈನ್‌ ಮಾಡಲಾಗಿದೆ.

ಗರ್ಭಿಣಿ ಅಸ್ವಸ್ಥ; ಪರೀಕ್ಷೆಗೆ ಮಾದರಿ: ಈ ಮಧ್ಯೆ 27 ವರ್ಷದ ಗರ್ಭಿಣಿಯೊಬ್ಬರು ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಸ್ವಸ್ಥರಾಗಿದರು. ಅಸ್ವಸ್ಥರಾದ ಮೂರು ತಿಂಗಳ ಗರ್ಭಿಣಿಗೆ ತಕ್ಷಣ ವಿಮಾನ ನಿಲ್ದಾಣದಲ್ಲೇ ಪ್ರಾಥಮಿಕ ಚಿಕಿತ್ಸೆ  ನೀಡಲಾಯಿತು. ಅಲ್ಲಿಂದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಗರ್ಭಿಣಿ ಹಾಗೂ ಅವರ ಪತಿಯನ್ನು ನಿಗಾದಲ್ಲಿ ಇಡಲಾಯಿತು. ಇಬ್ಬರೂ ಬೆಂಗಳೂರಿನ ನಿವಾಸಿಯಾಗಿದ್ದು, ದಂಪತಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ  ಪರೀಕ್ಷೆಗೊಳಪಡಿಸಲಾಗಿದೆ. ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಮಾನ ನಿಲ್ದಾಣದ ಕೋವಿಡ್‌-19 ಸ್ಕ್ರೀನಿಂಗ್‌ನಉಸ್ತುವಾರಿ ಡಾ.ಪ್ರಭುದೇವಗೌಡ  “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next