Advertisement

ಕೇರಳದಲ್ಲಿಂದು ಪ್ರಧಾನಿ ವೈಮಾನಿಕ ಸಮೀಕ್ಷೆ

06:00 AM Aug 18, 2018 | |

ತಿರುವನಂತಪುರ: ಮಹಾಮಳೆಗೆ ನಲುಗಿರುವ ಕೇರಳದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ವಿಷಯ ತಿಳಿಸಿದ್ದಾರೆ. ಶುಕ್ರವಾರ ಸಂಜೆಯೇ ಮೋದಿ ಅವರು ದಿಲ್ಲಿಯಿಂದ ತಿರುವನಂತಪುರಕ್ಕೆ ಆಗಮಿಸಲಿದ್ದು, ಶನಿವಾರ ಬೆಳಗ್ಗೆ ವೈಮಾನಿಕ ಸಮೀಕ್ಷೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

ಕೇರಳ ಮತ್ತಷ್ಟು ಕರಾಳ
ಶತಮಾನದ ಮಹಾಮಳೆಯ ಮಾರಣಾಂತಿಕ ಹೊಡೆತಕ್ಕೆ ತತ್ತರಿಸಿರುವ ಕೇರಳ ರಾಜ್ಯದ ಎಲ್ಲೆಡೆ ಶೋಕ, ಹಾಹಾಕಾರಗಳೇ ತುಂಬಿತುಳುಕುತ್ತಿದೆ. 2013ರಲ್ಲಿ ಉತ್ತರಾಖಂಡ ಎದುರಿಸಿದ ಮಾದರಿಯಲ್ಲೇ ದೇವರನಾಡನ್ನೂ ಜಲಪ್ರಳಯವು ನಡುಗಿಸುತ್ತಿದೆ. ಅಗಾಧ ಮಳೆಯಿಂದಾಗಿ ಗುರುವಾರದೊಂದು ದಿನದಲ್ಲೇ ಉಂಟಾದ ಸಾಲು ಸಾಲು ಅವಘಡಗಳಲ್ಲಿ 106 ಜನರು ಸಾವಿಗೀಡಾಗಿದ್ದು, ಆ. 8ರಿಂದ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿರುವ ಸಾವಿನ ಸಂಖ್ಯೆ 174ಕ್ಕೆ ಮುಟ್ಟಿದೆ. ಈ ಬಾರಿಯ ಮಾರಕ ಮಳೆಯಿಂದಾಗಿ ಒಟ್ಟು 324 ಮಂದಿ ಸಾವಿಗೀಡಾಗಿ, 2 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ಸರಾಸರಿಗಿಂತ ಶೇ.153ರಷ್ಟು ಹೆಚ್ಚುವರಿ ಮಳೆಯಾಗಿದೆ. 

ಮುಂದುವರಿದ ಅನಾಹುತ: ಪಟ್ಟಣಂತಿಟ್ಟ, ಅಳಪ್ಪುಳ, ಎರ್ನಾಕುಳಂ, ತ್ರಿಶೂರ್‌ ಜಿಲ್ಲೆಗಳಲ್ಲಿ ಮಾನ್ಸೂನ್‌ ಅನಾಹುತ ಮುಂದುವರಿದಿದೆ. ಇಡುಕ್ಕಿ, ಮುನ್ನಾರ್‌ ಹಾಗೂ ಪೊನ್ಮುಡಿಯ ಹಲವಾರು ಕಡೆ ಭೂಕುಸಿತ ಸಂಭವಿಸಿದ್ದು, ಈ ಪ್ರಾಂತ್ಯಗಳಿಗೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ, ಪ್ರವಾಸೋದ್ಯಮಕ್ಕೆ ತೀವ್ರ ಹಾನಿಯಾಗಿದೆ. ಭೀಕರ ಪ್ರವಾಹಕ್ಕೀಡಾದ ಪ್ರಾಂತ್ಯಗಳಲ್ಲೊಂದಾದ ವಯನಾಡ್‌ಗೂ ಕೇರಳದ ಇತರ ಪ್ರದೇಶಗಳ ಸಂಪರ್ಕ ಕಡಿದು ಹೋಗಿದೆ. 

ಮತ್ತಷ್ಟು ಭೀತಿ: ತ್ರಿಶೂರ್‌ ಹಾಗೂ ಚಾಲಕ್ಕುಡಿ ಪಟ್ಟಣಗಳು ಬಹುತೇಕ ನೀರಿನಲ್ಲಿ ಮುಳುಗಿವೆ. ಮಳೆಬಾಧಿತ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಸುರಿಯುತ್ತಿವ ವರ್ಷಧಾರೆಯು ಸದ್ಯಕ್ಕೆ ನಿಲ್ಲುವ ಸೂಚನೆಯಿಲ್ಲ. ಗಂಟೆಗೆ ಸುಮಾರು 60 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಬಿರುಗಾಳಿ ಸಹಿತ ಮಳೆಯು ಪಟ್ಟಣಂತಿಟ್ಟ, ಕೊಲ್ಲಂ, ಅಳಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶೂರ್‌, ಪಾಲಕ್ಕಾಡ್‌, ಮಲಪ್ಪುರಂ, ಕಲ್ಲಿಕೋಟೆ ಹಾಗೂ ವಯನಾಡ್‌ ಜಿಲ್ಲೆಗಳಲ್ಲಿ ಮತ್ತಷ್ಟು ರಾದ್ಧಾಂತ ಸೃಷ್ಟಿಸುವ ಭೀತಿ ಆವರಿಸಿದೆ. ಏತನ್ಮಧ್ಯೆ, ತಿರುವನಂತಪುರಂ, ಕಾಸರಗೋಡಿಗೆ ನೀಡಲಾಗಿದ್ದ ರೆಡ್‌ ಅಲರ್ಟ್‌ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.  

ಬಿಡುವಿಲ್ಲದ ಕಾರ್ಯಾಚರಣೆ:  ಕಾರ್ಯಾಚರಣೆಯಲ್ಲಿ ನಿರತವಾಗಿರುವ 16 ಭೂಸೇನೆ ತುಕಡಿ, 28 ನೌಕಾ ಪಡೆತುಕಡಿ, 51 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್) ತುಕಡಿಗಳ ಸಿಬ್ಬಂದಿ ಈವರೆಗೆ, ಸುಮಾರು 50,000 ಕುಟುಂಬಗಳಿಗೆ ಸೇರಿದ 2.23 ಲಕ್ಷ ಜನರನ್ನು ನಿರಾಶ್ರಿತರ ಶಿಬಿರಗಳಿಗೆ ತಲುಪಿಸಿದ್ದಾರೆ. ಜಲಾವೃತ ಪ್ರದೇಶಗಳಿಗೆ ವಾಯುಪಡೆ ಸಿಬ್ಬಂದಿ ಆಹಾರ ಪೊಟ್ಟಣ, ಶುದ್ಧ ನೀರಿನ ಬಾಟಲಿಗಳನ್ನು ಸರಬರಾಜು ಮಾಡುತ್ತಿದ್ದಾರೆ.

Advertisement

ಮೀನುಗಾರರ ಮಾನವೀಯ ಸೇವೆ: ಸೈನಿಕರ ಕಾರ್ಯಾಚರಣೆಗೆ ಕೇರಳದ ಮೀನುಗಾರರೂ ಕೈಜೋಡಿಸಿದ್ದಾರೆ. ಆಲುವಾ, ಕಲಾಡಿ, ಪೆರುಂಬಾ ವೂರ್‌, ಮೂವತ್ತು ಪುಳ ಹಾಗೂ ಚಾಲಕ್ಕುಡಿಯಲ್ಲಿ ತಮ್ಮ ದೋಣಿಗಳಲ್ಲಿ ಪ್ರವಾಹ ಹಾಗೂ ಜಲಾವೃತ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಅಪಾಯದಲ್ಲಿ ಸಿಲುಕಿದವರನ್ನು ಪಾರು ಮಾಡುತ್ತಿದ್ದಾರೆ. 

ಗರ್ಭಿಣಿಗೆ ನೆರವು
ಶುಕ್ರವಾರದ ಕಾರ್ಯಾಚರಣೆ ವೇಳೆ, ನೀರಿನಲ್ಲಿ ಸಿಲುಕಿ, ಪ್ರಸವದ ಅಂಚಿಗೆ ಸರಿದಿದ್ದ ಗರ್ಭಿಣಿಯೊಬ್ಬರನ್ನು ಹಗ್ಗದ ಸಹಾಯದಿಂದ ಹೆಲಿಕಾಪ್ಟರ್‌ ಮೂಲಕ ಮೇಲೆತ್ತಿ ಸೇನಾ ಆಸ್ಪತ್ರೆಗೆ ದಾಖಲಿಸಿದ ದೃಶ್ಯಗಳನ್ನು ವಾಹಿನಿಗಳು ಪ್ರಸಾರ ಮಾಡಿದ್ದು, ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ಶುಕ್ರವಾರ ಮಹಿಳೆ ಗಂಡುಮಗುವಿಗೆ ಜನ್ಮನೀಡಿದ್ದಾರೆ.

ತ.ನಾಡಿಗೂ ಪ್ರವಾಹ ಭೀತಿ
ಕರ್ನಾಟಕದ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿರುವ ಕಾರಣ ತಮಿಳು ನಾಡಿನ ಕಾವೇರಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಥೇಣಿ ಮತ್ತು ಮದುರೈ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಲಾಗಿದ್ದು, ಸುರಕ್ಷಿತ ಪ್ರದೇಶ ಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ. 8 ಸಾವಿರಕ್ಕೂ ಅಧಿಕ ಮಂದಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. 

ಅಭಾವ ಸೃಷ್ಟಿ
ಮಳೆ ಪೀಡಿತ ಜಿಲ್ಲೆಗಳ ಕಥೆ ಹೀಗಾದರೆ, ಮಳೆಯ ಪ್ರಕೋಪದಿಂದ ಕೊಂಚ ತಪ್ಪಿಸಿ ಕೊಂಡಿರುವ ಇತರ ಜಿಲ್ಲೆಗಳಲ್ಲೂ ಜನಜೀವನ ಹದಗೆಟ್ಟಿದೆ. ಆಸ್ಪತ್ರೆಗಳು ನೆರೆ ಪೀಡಿತ ಪ್ರದೇಶಗಳ ಗಾಯಾಳುಗಳಿಂದ ತುಂಬಿ ಹೋಗಿವೆ. ಹೊಸ ಗಾಯಾಳುಗಳನ್ನು ದಾಖಲಿಸಲು ಸ್ಥಳವಿಲ್ಲದಂತಾಗಿದೆ. ಜತೆಗೆ ಔಷಧಿ, ಆಮ್ಲಜನಕದ ಬರವೂ ಕಾಡಲಾರಂಭಿಸಿದೆ. ತೈಲ ಸರಬರಾಜು ನಿಂತಿರುವುದರಿಂದ ಕೆಲ ಪೆಟ್ರೋಲ್‌ ಬಂಕ್‌ಗಳು ಖಾಲಿಯಾಗಿವೆ. ಹಾಗಾಗಿ, ಸದ್ಯಕ್ಕೆ ತೈಲ ಹೊಂದಿರುವ ಪೆಟ್ರೋಲ್‌ ಬಂಕ್‌ಗಳಿಗೆ ನಿರ್ದೇಶನ ನೀಡಿರುವ ಸಂಬಂಧ ಪಟ್ಟ ಪೆಟ್ರೋಲ್‌ ಕಂಪನಿಗಳು, 1000 ಲೀ. ಪೆಟ್ರೋಲ್‌, 3000 ಲೀ. ಡೀಸೆಲ್‌ ಅನ್ನು ಕಾಯ್ದಿಟ್ಟುಕೊಳ್ಳುವಂತೆ ಸೂಚಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next