ಬೆಳಗಾವಿ: ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಕೆ, ಗೋಶಾಲೆ, ಮೇವಿನ ಬ್ಯಾಂಕ್ ನಿರ್ವಹಣೆ ಹಾಗೂ ಇನ್ನಿತರ ತುರ್ತು ಬರ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ರವಿಕುಮಾರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 775.83 ಕೋಟಿ ಹಾಗೂ ತಹಶೀಲ್ದಾರ್ ಖಾತೆಯಲ್ಲಿ 119.28 ಕೋಟಿ ಅನುದಾನ ಲಭ್ಯವಿದೆ. ಮೇವಿನ ಕೊರತೆ ಉಂಟಾಗದಂತೆ ರೈತರಿಗೆ ಮೇವಿನ ಬೀಜ ವಿತರಿಸಿ, ಮೇವು ಬೆಳೆಸಲು, ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ 20 ಕೋಟಿ ರೂ.ಗಳನ್ನು ಪಶು ಸಂಗೋಪನೆ ಇಲಾಖೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ತಾಲೂಕು ಮಟ್ಟದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ನಿರ್ವಹಣೆಗೆ ಹಾಗೂ ಬರ ಪರಿಹಾರ ಕ್ರಮಗಳ ಮೇಲ್ವಿಚಾರಣೆಗಾಗಿ ಶಾಸಕರ ನೇತƒತ್ವದಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಯಾವ ಜಿಲ್ಲೆಯಲ್ಲೂ ಅನುದಾನದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಎನ್‌ಡಿಆರ್‌ಎಫ್ ಅನುದಾನವನ್ನು ನಿರೀಕ್ಷಿಸಲಾಗಿದೆ. ಇದರ ಮಧ್ಯೆ ರಾಜ್ಯ ಸರಕಾರ ಮೊದಲ ಕಂತಾಗಿ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಬೆಳೆಹಾನಿ ಪರಿಹಾರವಾಗಿ 2000 ರೂ.ಪಾವತಿಸಲು ತೀರ್ಮಾನಿಸಿದ್ದು ಇನ್ನೊಂದು ವಾರದಲ್ಲಿ ಈ ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ