ಕೊಪ್ಪಳ: ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಗೆ ಈ ವರ್ಷ 323 ಕೋಟಿ ರೂ. ಅನುದಾನವನ್ನ ಹಂಚಿಕೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದರು.
ರಾಜ್ಯದಲ್ಲಿ ಬರದ ಪರಿಸ್ಥಿತಿಯಿಂದ ಕುಡಿಯುವ ನೀರು ಮತ್ತು ಬರ ನಿರ್ವಹಣೆಗೆ ನಾವು ಅನುದಾನ ಅತಿ ವೇಗವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಕ್ರಿಯಾಯೋಜನೆಗೆ ತಕ್ಕಂತೆ ಹೆಚ್ಚಿನ ಅನುದಾನದ ನೆರವು ಬೇಕಿದ್ದರೂ ಪ್ರಸ್ತಾವನೆ ಸಲ್ಲಿಸಿದರೆ ವಾರದೊಳಗೆ ನಾವು ಕ್ರಮ ಕೈಗೊಂಡು ಬಿಡುಗಡೆ ಮಾಡುತ್ತಿದ್ದೇವೆ. ಪ್ರತಿ ವಾರ ವಿಧಿಸಿ ನಡೆಸಿ ಚರ್ಚೆ ನಡೆಸುತ್ತಿದ್ದೇವೆ. ಅದರಲ್ಲೂ ಟ್ಯಾಂಕರ್ ನೀರು ಪೂರೈಕೆ ಮಾಡುವ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಳ್ಳದೇ ಈ ವರ್ಷ ತಿಂಗಳು ಬದಲಿಗೆ 15 ದಿನದೊಳಗೆ ಪಾವತಿಗೆ ಕ್ರಮ ಕೈಗೊಂಡಿದ್ದೇವೆ. ಅನುಮತಿ ಪಡೆದು ಬೋರ್‌ವೆಲ್ ಕೊರೆಸಿದ ಕಾಮಗಾರಿಗಳಿಗೆ ಮಾತ್ರ ನಾವು ಅನುದಾನ ಮೀಸಲಿಡುತ್ತೇವೆ ಎಂದರು.
ಜಿಪಂ ಸಿಇಒ ಪೆದ್ದಪ್ಪಯ್ಯ ಹಾಗೂ ಜಿಲ್ಲಾಧಿಕಾರಿ ಸುನೀಲ್ಕುಮಾರ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಟಾಸ್ಕ್ ಫೋರ್ಸ್ ಹಾಗೂ ಜಿಲ್ಲಾಧಿಕಾರಿ ಖಾತೆಯಿಂದ ಅನುದಾನ ನೀಡುತ್ತಿದ್ದೇವೆ. ಪ್ರತಿ ತಾಲೂಕಿಗೆ 1.50 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ ಎಂದರು.
ಸಚಿವರು ಮಾತನಾಡಿ, ಕುಡಿಯುವ ನೀರಿನ ಯಾವುದೇ ಬಿಲ್ಗಳನ್ನು ಪೆಂಡಿಂಗ್ ಇಡುವುಂತಿಲ್ಲ. ಕೂಡಲೇ ಪಾವತಿ ಮಾಡಬೇಕು. ವಾರಕ್ಕೊಮ್ಮೆ ನಾವು ಬರಗಾಲಕ್ಕೆ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ. ಹಣದ ಅವಶ್ಯಕತೆ ಇದ್ದವರು ಬೇಗನೆ ಬಿಲ್ ಪಾವತಿಸಿ ಕ್ಲಿಯರ್ ಮಾಡಿಕೊಳ್ಳಿ ಎಂದರು.
Advertisement
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನಲ್ಲಿ 700 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಜಿಲ್ಲೆಯ ಇತರೆ ಕುಡಿಯುವ ನೀರಿನ ಯೋಜನೆಗಳಿಗೆ 323 ಕೋಟಿ ಅನುದಾನ ಹಂಚಿಕೆ ಮಾಡಿದೆ. ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಕಾಮಗಾರಿಗಳ ಪ್ರಗತಿ ವೇಗವಾಗಿ ನಡೆಯಬೇಕೆಂದು ಸೂಚನೆ ನೀಡಿದರು.
Related Articles
Advertisement
ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಮುಂದುವರಿದರೆ ಅನುದಾನದ ಅವಶ್ಯಕತೆಯಿದ್ದರೆ ಕೂಡಲೇ ರಾಜ್ಯ ಕಚೇರಿಗೆ ಪತ್ರ ಬರೆದು ಇಲ್ಲಿನ ಬರದ ಪರಿಸ್ಥಿತಿ ತಿಳಿಸಬೇಕು. ಕೂಡಲೇ ಅವಶ್ಯ ಅನುದಾನದ ನೆರವು ನೀಡುವ ಕುರಿತು ನಿಮ್ಮೊಂದಿಗೆ ಚರ್ಚೆ ನಡೆಸಲಾಗುವುದು. ಈ ಬಾರಿ ಕಾಮಗಾರಿಗಳ ಅನುದಾನ ಸಕಾಲಕ್ಕೆ ಬಳಕೆ ಮಾಡಿಕೊಳ್ಳದಿದ್ದರೆ ಬಂದ ಹಣ ವಾಪಾಸ್ ಹೋಗಲಿದೆ. ಅದಕ್ಕೆ ಏನೂ ಮಾಡಲು ಆಗುವುದಿಲ್ಲ. ಇನ್ನೂ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಇಂಜನಿಯರ್‌ಗಳ ಸಮಸ್ಯೆಯಿದೆ. ಈ ವಾರದಲ್ಲಿ ಇಲ್ಲಿಗೆ ಇಂಜನಿಯರ್‌ಗಳನ್ನು ನಿಯೋಜನೆ ಮಾಡಲಾಗುವುದು ಎಂದರು.
ಈ ವೇಳೆ ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ನಾಪೂರ, ಜಿಲ್ಲಾಧಿಕಾರಿ ಸುನೀಲ್ ಕುಮಾರ, ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ ಸೇರಿ ಇತರರು ಪಾಲ್ಗೊಂಡಿದ್ದರು.
ಸಂಸದ ಸಂಗಣ್ಣ ಕರಡಿ ಅವರು ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಾಹರ ನಡೆದ ಬಗ್ಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ ಅವರು, ಸಂಸದರು ಅಕ್ರಮ ನಡೆದ ಬಗ್ಗೆ ಮಾಹಿತಿ, ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆ ಕೊಟ್ಟರೆ ನಾವು ಖಂಡಿತ ಪರಿಶೀಲನೆ ನಡೆಸುತ್ತೇವೆ. ಉದ್ಯೋಗ ಖಾತ್ರಿ ಯೋಜನೆಯಡಿ ನಾವು ಹೆಚ್ಚಿನ ಹಣವನ್ನು ರಾಜ್ಯಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲಿನ ದುರುಪಯೋಗ ಸಹಿಸಲ್ಲ. ನಾವು ಉದ್ಯೋಗ ಖಾತ್ರಿ ಯೋಜನೆಗೆ ವೇಗ ಕೊಟ್ಟಿದ್ದೇವೆ. ಏನಾದರೂ ಅಕ್ರಮ ನಡೆದರೆ ಕ್ರಮ ಕೈಗೊಳ್ಳಲಿದ್ದೇವೆ ಎಂದರು.