ಬೆಂಗಳೂರು: ಕೋವಿಡ್ ಸೋಂಕಿತರಿಗೆ ಎದುರಾಗುತ್ತಿರುವ ಹಾಸಿಗೆಗಳ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈಗಾಗಲೇ 1200 ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಇನ್ನು 2000 ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಖಾಸಗಿ ಆಸ್ಪತ್ರೆಗಳ ಸಂಘ, ಹೋಟೆಲ್ ಉದ್ಯಮಿಗಳ ಸಂಘ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ವರ್ಚುವಲ್ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಪಕ್ಕದಲ್ಲಿಯೇ ದೊಡ್ಡ ದೊಡ್ಡ ಹೋಟೆಲುಗಳಿವೆ. ಈ ಹೊಟೆಲ್ ಗಳಲ್ಲಿ ರೂಂ ಪಡೆದು ಅಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 13 ಆಸ್ಪತ್ರೆಗಳ ಜೊತೆ ಹೋಟೆಲ್ ಗಳನ್ನು ಜೋಡಣೆ ಮಾಡಲಾಗಿದೆ. ಇನ್ನಷ್ಟು ಹೊಟೇಲ್ ಮತ್ತು ಆಸ್ಪತ್ರೆಗಳ ಜೋಡಣೆ ಕೆಲಸ ನಡೆಯುತ್ತಿದೆ. ಒಂದು ಸಾರಿ ಹೋಟೆಲ್ ಗಳನ್ನು ಪಡೆದ ನಂತರ ಅಲ್ಲಿ ಆಕ್ಸಿಜನ್ ಕಾನ್ಸೆಂಟ್ರೇಟರ್, ರೋಗಿಗೆ ಊಟ ಮತ್ತು ಇತರೆ ಕೋವಿಡ್ ಸಂಬಂಧಿತ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಲಾಗುವುದು. ಹೋಟೆಲ್ ಸಂಘದವರ ಬೇಡಿಕೆ ಮೇರೆಗೆ SAS ಪೋರ್ಟಲ್ ಜತೆ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಜೋಡಣೆ ಮಾಡಲಾಗುವುದು. ಹೊಟೇಲ್ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಬೆಡ್ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ಹೆಚ್ಚುವರಿಯಾಗಿ ತಲಾ10 ರಿಂದ 15 ಆಕ್ಸಿಜನ್ ಬೆಡ್ ಗಳನ್ನು ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಸರಕಾರದಿಂದ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಬೆಡ್ ನೀಡದ ಆಸ್ಪತ್ರೆಗಳ ಮೇಲೆ ಕ್ರಮ: ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್ ಉಸ್ತುವಾರಿಗೆ ನಿಯೋಜಿಸಲಾಗಿರುವ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಲಾಯಿತು. ಸರ್ಕಾರಕ್ಕೆ ಬೆಡ್ ಗಳನ್ನು ನೀಡದೆ ಸುಳ್ಳು ಮಾಹಿತಿ ನೀಡುತ್ತಿದ್ದ ಮೂರು ಖಾಸಗಿ ಆಸ್ಪತ್ರೆಗಳ ಮೇಲೆ ಈಗಾಗಲೇ ಕ್ರಮ ಜರುಗಿಸಲಾಗಿದೆ ಎಂದು ಅವರು ವಿವರಿಸಿದರು.
ಮೂವತ್ತಕ್ಕಿಂತಲೂ ಕಡಿಮೆ ಬೆಡ್ ಇರುವ ಆಸ್ಪತ್ರೆ ಗಳಿಂದಲೂ ಸರ್ಕಾರಿ ಕೋಟಾ ಪಡೆಯಲು ನಿರ್ಧರಿಸಲಾಗಿದೆ. ಅವುಗಳಲ್ಲಿ ICU ಮತ್ತು ಆಕ್ಸಿಜನ್ ಬೆಡ್ ಗಳು ಸೇರಿವೆ. ಈ ಆಸ್ಪತ್ರೆಗಳ ಜೊತೆ ಸಮಾಲೋಚನೆ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಆಕ್ಸಿಜನ್ ಪೂರೈಕೆ: ಒರಿಸ್ಸಾ, ಟಾಟಾನಗರ ಮತ್ತು ಇತರೆ ಕಡೆಗಳಿಂದ ರಾಜ್ಯಕ್ಕೆ ಆಕ್ಸಿಜನ್ ಬರಬೇಕಾಗಿದೆ. ಒಂದು ಬಾರಿ ರಾಜ್ಯಕ್ಕೆ ಆಕ್ಸಿಜನ್ ಟ್ಯಾಂಕರ್ ಗಳು ಬಂದ ನಂತರ ಅವುಗಳ ರೀಫಿಲ್ ತೊಂದರೆಯಾಗುವುದಿಲ್ಲ. ನಿರಂತರವಾಗಿ ಆಕ್ಸಿಜನ್ ಪೂರೈಕೆ ಆಗುತ್ತದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆ ಕಡಿಮೆಯಾಗುತ್ತಿಲ್ಲ. ನಿಯಮಗಳ ಪ್ರಕಾರ ಯಾರಿಗೆಲ್ಲ ತಪಾಸಣೆ ಮಾಡಬೇಕೋ ಅವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಆತಂಕ ಬೇಡ: ವ್ಯಾಕ್ಸಿನ್ ಎಲ್ಲರಿಗೂ ಸಿಗುತ್ತದೆ. ಸ್ವಲ್ಪ ತಾಳ್ಮೆ ಇರಲಿ. ವ್ಯಾಕ್ಸಿನ್ ತಯಾರಿಕೆಯಲ್ಲಿ ವಿಳಂಬವಾಗುತ್ತಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಆರಂಭದಲ್ಲಿ ಜನ ವ್ಯಾಕ್ಸಿನ್ ತೆಗೆದುಕೊಳ್ಳಲಿಲ್ಲ. ಈಗ ಬೇಡಿಕೆ ಹೆಚ್ಚಿದೆ. ಈಗಿರುವ ಲಸಿಕೆಯನ್ನು ಮೊದಲ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.