Advertisement

ಕ್ವಿಂಟಲ್‌ ರಾಗಿಗೆ 3150 ರೂ.ಬೆಂಬಲ ಬೆಲೆ

09:28 PM Dec 23, 2019 | Lakshmi GovindaRaj |

ತುಮಕೂರು: ಜಿಲ್ಲೆಯಲ್ಲಿ ಈಗಾಗಲೇ ಇರುವ 7 ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಗಿ ಖರೀದಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ 2019-20ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ನಡೆದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಸಾಲಿನ ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್‌, ತಿಪಟೂರು, ತುಮಕೂರು, ತುರುವೇಕೆರೆ, ಹುಳಿಯಾರ್‌ ಖರೀದಿ ಕೇಂದ್ರಗಳಲ್ಲಿ ಈ ಬಾರಿಯೂ ಖರೀದಿ ಪ್ರಕ್ರಿಯೆ ಮುಂದುವರಿಸುವುದು ಸೂಕ್ತ ಎಂದು ತಿಳಿಸಿದರು.

ಲೋಪಬೇಡ: 2019-20ನೇ ಸಾಲಿನ ಎಂಎಸ್‌ಪಿ ಯೋಜನೆಯಡಿ ರಾಗಿ ಖರೀದಿ ಬೆಲೆ ಕ್ವಿಂಟಲ್‌ಗೆ 3150 ರೂ.ಗಳಾಗಿದ್ದು, ಜನವರಿ 2ನೇ ವಾರದಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಖರೀದಿ ಕೇಂದ್ರಗಳಲ್ಲಿ ಎಫ್ಎಕ್ಯೂ ಗುಣಮಟ್ಟದ ರಾಗಿಯನ್ನೇ ಖರೀದಿ ಮಾಡಬೇಕು. ಖರೀದಿಯಲ್ಲಿ ಲೋಪವಾದರೆ ಸಂಬಂಧಪಟ್ಟವರೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಖರೀದಿ ಕೇಂದ್ರಗಳಲ್ಲಿ ಎಂಎಸ್‌ಪಿ ಹಾಗೂ ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ರೈತರಿಗೆ ಯಾವುದೇ ಗೊಂದಲಗಳಿಲ್ಲದಂತೆ ನೋಡಿಕೊಳ್ಳಲು ಕರಪತ್ರ ಹಂಚುವುದು, ಎಪಿಎಂಸಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ ಅಳವಡಿಕೆ ಹಾಗೂ ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ರಸೀದಿ ನೀಡಿ: ಖರೀದಿ ಕೇಂದ್ರಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಹಾಗೂ ಸಂಗ್ರಹಣಾಗಾರದಲ್ಲಿ ಆಯಾ ದಿನ ರೈತರಿಂದ ಖರೀದಿಸಿದ ರಾಗಿಗೆ ಅದೇ ದಿನ ಉಗ್ರಾಣ ರಶೀದಿ ನೀಡಬೇಕು ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಕಳೆದ ಸಾಲಿನ ರಾಗಿ ಇಳುವರಿ ಹಾಗೂ ಈ ಸಾಲಿನಲ್ಲಿ ಬರಬಹುದಾದ ಇಳುವರಿ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರಲ್ಲದೇ, ಕಳೆದ ಸಾಲಿಗಿಂತ ಈ ಬಾರಿ ರಾಗಿ ಇಳುವರಿ ಶೇ.40-50 ಅಧಿಕವಾಗಿರುವುದರಿಂದ ಖರೀದಿ ಕೇಂದ್ರಗಳಿಗೆ ಹೆಚ್ಚಿನ ರಾಗಿ ಬರುವ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಜಂಟಿ ನಿರ್ದೇಶಕ ಎಂ.ಸಿ.ಶ್ರೀನಿವಾಸಯ್ಯ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು, ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕರು, ರಾಜ್ಯ ಉಗ್ರಾಣ ನಿಗಮ ತುಮಕೂರು ಘಟಕ-1 ಮತ್ತು 2, ಹಾಗೂ ತಿಪಟೂರಿನ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲೆಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮತ್ತಿತರರಿದ್ದರು.

ಖರೀದಿ ಕೇಂದ್ರಗಳ ಸಿಬ್ಬಂದಿ ಹಾಗೂ ಗ್ರೇಡರ್‌ಗಳಿಗೆ ಖರೀದಿ ಪ್ರಕ್ರಿಯೆ ಕುರಿತಂತೆ ಸೂಕ್ತ ಸಲಹೆ ಸೂಚನೆ ಹಾಗೂ ತರಬೇತಿ ನೀಡಿ ಪಾರದರ್ಶಕವಾಗಿ ಕೆಲಸ ನಡೆಯುವಂತೆ ನಿಗಾ ವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಬಳಸುವ ತೂಕದ ಉಪಕರಣ ಪ್ರಮಾಣೀಕರಿಸಬೇಕು ಮತ್ತು ಆಗಾಗ ಪರೀಕ್ಷಿಸಿ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ವರದಿ ನೀಡಬೇಕು.
-ರಾಕೇಶ್‌ಕುಮಾರ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next