Advertisement

ಬೆಳ್ತಂಗಡಿ ತಾ|ಕಚೇರಿ: 31 ಹುದ್ದೆ  ಖಾಲಿ; ತಹಶೀಲ್ದಾರ್‌ ಪ್ರಭಾರ!

01:40 AM Jul 27, 2018 | Karthik A |

ಬೆಳ್ತಂಗಡಿ: ಸರಕಾರಿ ವ್ಯವಸ್ಥೆಯಲ್ಲೇ ಕಂದಾಯ ಇಲಾಖೆ ಅತ್ಯಂತ ಪ್ರಮುಖ ವಿಭಾಗವಾಗಿದ್ದು, ಇದರ ಕಾರ್ಯ ನಡೆಯುವ ತಾಲೂಕು ಕಚೇರಿ ಅತ್ಯಂತ ಬ್ಯುಸಿ ಕಚೇರಿಯಾಗಿದೆ. ಆದರೆ ಇಂತಹ ಕಚೇರಿಯಲ್ಲೇ ಹುದ್ದೆಗಳು ಖಾಲಿಯಾಗಿದ್ದರೆ ಏನಾಗಬೇಕು…! ಬೆಳ್ತಂಗಡಿ ತಾಲೂಕು ಕಚೇರಿಗೂ ಅದೇ ಸ್ಥಿತಿ ಬಂದಿದೆ. ತಾಲೂಕಿನ ತಹಶೀಲ್ದಾರ್‌ ಹುದ್ದೆ ಸಹಿತ ಬಹುತೇಕ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಮಂಜೂರಾದ ಒಟ್ಟು 97 ಹುದ್ದೆಗಳಲ್ಲಿ 31 ಹುದ್ದೆಗಳು ಖಾಲಿ ಇವೆ. ಒಟ್ಟು 66 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ತಾಲೂಕು ಕಚೇರಿಗೆ ನೂರಾರು ಮಂದಿ ನಿತ್ಯ ತಮ್ಮ ಹತ್ತಾರು ಸಮಸ್ಯೆಗಳನ್ನು ಹೊತ್ತುತರುತ್ತಿದ್ದು, ಜನತೆ ತಮ್ಮ ಒಂದು ಸಮಸ್ಯೆ ಪರಿಹರಿಸಿಕೊಳ್ಳಬೇಕಾದರೆ ತಿಂಗಳು, ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಇದರ ನಡುವೆ ಇಂಟರ್ನೆಟ್‌, ಸರ್ವರ್‌ ಸಮಸ್ಯೆಗಳೂ ಜನರನ್ನು ಕಾಡುತ್ತಿವೆ.

Advertisement

ಭರ್ತಿ- ಖಾಲಿ ಯಾವ್ಯಾವು?
ತಾಲೂಕು ಕಚೇರಿಯ ಗ್ರೇಡ್‌ 1 ಹಾಗೂ 2 ತಹಶೀಲ್ದಾರ್‌ ಹುದ್ದೆ ಎರಡೂ ಖಾಲಿ ಇದೆ. ಮಂಜೂರಾದ ಮೂರು ಶಿರಸ್ತೇದಾರ ಹುದ್ದೆ, 2 ನಾಡ ಕಚೇರಿ ಉಪ ತಹಶೀಲ್ದಾರ್‌ ಹುದ್ದೆ, ತಲಾ ಒಂದೊಂದು ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಲ್ಲಿ ಎಲ್ಲವೂ ಖಾಲಿ ಇದೆ. ಮಂಜೂರಾದ 3 ಕಂದಾಯ ನಿರೀಕ್ಷಕರ ಹುದ್ದೆ, ಒಂದು ದಫೇದಾರ್‌ ಹುದ್ದೆ ಭರ್ತಿ ಇದೆ. ತಾಲೂಕಿನ 48 ಗ್ರಾ. ಪಂ.ಗಳಿಗೆ ಮಂಜೂರಾದ 48 ಗ್ರಾಮ ಕರಣಿಕ ಹುದ್ದೆಗಳಲ್ಲಿ 44 ಮಾತ್ರ ಭರ್ತಿ ಇದೆ.

ಪ್ರಥಮ ದರ್ಜೆ ಸಹಾಯಕ 7 ಹುದ್ದೆಗಳಲ್ಲಿ 6 ಭರ್ತಿಯಾಗಿದ್ದು, ಇವರಲ್ಲಿ ಒಬ್ಬರು ನಿಯೋಜನೆಯ ಮೇರೆಗೆ ಮಂಗಳೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ದ್ವಿತೀಯ ದರ್ಜೆ ಸಹಾಯಕ 12 ಹುದ್ದೆಗಳಲ್ಲಿ 5, ಬೆರಳಚ್ಚುಗಾರ 3 ಹುದ್ದೆಗಳಲ್ಲಿ 2, ಡಿ ಗ್ರೂಪ್‌ 10 ಹುದ್ದೆಗಳಲ್ಲಿ 7 ಹುದ್ದೆಗಳು ಖಾಲಿ ಇವೆ.

ಆಹಾರ ಇಲಾಖೆ ಹೀಗಿದೆ
ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಮಂಜೂರಾದ ಒಟ್ಟು 4 ಹುದ್ದೆಗಳಲ್ಲಿ ಒಂದು ಮಾತ್ರ ಭರ್ತಿಯಾಗಿದೆ. ಆಹಾರ ಶಿರಸ್ತೇದಾರ ಹಾಗೂ ದ್ವಿತೀಯ ದರ್ಜೆ ಸಹಾಯಕ ತಲಾ ಒಂದೊಂದು ಹುದ್ದೆಗಳಲ್ಲಿ ಎರಡೂ ಖಾಲಿ ಇವೆ. ಆಹಾರ ನಿರೀಕ್ಷಕರ 2 ಹುದ್ದೆಗಳಲ್ಲಿ ಒಂದು ಮಾತ್ರ ಭರ್ತಿ ಇದೆ.

ಚುರುಕು ಮುಟ್ಟಿಸುವ ಕಾರ್ಯ
ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ತಮ್ಮ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಜನರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಹರೀಶ್‌ ಪೂಂಜ ಅವರು ಈಗಾಗಲೇ ಹಲವು ಬಾರಿ ತಾಲೂಕು ಕಚೇರಿಗೆ ಭೇಟಿ ನೀಡಿ ಸಿಬಂದಿಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಕಚೇರಿಗೆ ಪೂರ್ಣ ಪ್ರಮಾಣದ ಸಿಬಂದಿ ನೇಮಕವಾದಲ್ಲಿ ಜನತೆಗೆ ಇನ್ನಷ್ಟು ಹೆಚ್ಚಿನ ಸೇವೆ ಸಿಗಲಿದೆ.

Advertisement

ಮುಖ್ಯಸ್ಥರ ಹುದ್ದೆ ಖಾಲಿ!
ತಾಲೂಕು ಕಚೇರಿಗೆ ತಹಶೀಲ್ದಾರ್‌ ಅವರು ಮುಖ್ಯಸ್ಥರಾಗಿದ್ದು, ಬೆಳ್ತಂಗಡಿಯಲ್ಲಿ ಈ ಹುದ್ದೆಯೇ ಖಾಲಿ ಇದೆ. ಪ್ರಸ್ತುತ ಪ್ರೊಬೆಷನರಿ ಸಹಾಯಕ ಆಯುಕ್ತ ಮದನ್‌ ಮೋಹನ್‌ ಅವರು ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕಾರ ಅವರನ್ನು ಎಸಿ ಹುದ್ದೆಗೆ ನೇಮಕಗೊಳಿಸಿದಾಗ ಅವರು ತೆರಳಬೇಕಿದೆ. ಆಗ ಇಲ್ಲಿನ ತಹಶೀಲ್ದಾರ್‌ ಹುದ್ದೆ ಖಾಲಿಯಾಗುತ್ತದೆ. ತಹಶೀಲ್ದಾರ್‌ ನೇಮಕ ಸರಕಾರಿ ಮಟ್ಟದಲ್ಲಿ ನಡೆಯುವುದರಿಂದ ಅದರ ಕುರಿತು ನಾವೇನೂ ಹೇಳುವಂತಿಲ್ಲ ಎನ್ನುತ್ತಾರೆ ಸಹಾಯಕ ಆಯುಕ್ತರು.

ಬ್ಯಾಲೆನ್ಸ್‌ ಮಾಡಿದ್ದೇವೆ
ತಾಲೂಕು ಕಚೇರಿಯಲ್ಲಿ ಸಿಬಂದಿ ಕೊರತೆ ಇರುವುದು ನಿಜ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬ್ಯಾಲೆನ್ಸ್‌ ಮಾಡಿ ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಪ್ರಸ್ತುತ ಭಡ್ತಿ ಪ್ರಕ್ರಿಯೆ ನಡೆಯುತ್ತಿದ್ದು, ಹೊಸ ನೇಮಕಾತಿ ನಡೆಯಲಿದೆ. 
– ಎಚ್‌.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತರು, ಪುತ್ತೂರು

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next