ಬೆಂಗಳೂರು: ರಾಜ್ಯದ 81 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಪೈಕಿ 31 ಕಾಲೇಜಿನಲ್ಲಿ ಕಳೆದ ಒಂದೆರಡು ವರ್ಷದಿಂದ ಕಾಯಂ ಪ್ರಾಂಶುಪಾಲರೇ ಇಲ್ಲ. ಹೀಗಾಗಿ, ಇಲಾಖೆಗೆ ಬೇಕಾದ ಆಡಳಿತಾತ್ಮಕ ಮಾಹಿತಿಗಳು ಸಕಾಲಕ್ಕೆ ಕಾಲೇಜುಗಳಿಂದ ಲಭ್ಯವಾಗುತ್ತಿಲ್ಲ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರ ನೇಮಕ ಇರುವುದಿಲ್ಲ. ಬದಲಾಗಿ, ಸೇವಾ ಜೇಷ್ಠತೆಯ ಆಧಾರದಲ್ಲಿ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ತಾಂತ್ರಿಕ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಹಂತದಲ್ಲಿರುವುದರಿಂದ ಕಳೆದ ಎರಡು ವರ್ಷದಿಂದ ಕಾಯಂ ಪ್ರಾಂಶುಪಾಲರಾಗಿ ಯಾರಿಗೂ ಪದೋನ್ನತಿ ನೀಡಿಲ್ಲ. ಪ್ರಭಾರ ಪ್ರಾಂಶುಪಾಲರಾಗಿ ಮೂರ್‍ನಾಲ್ಕು ತಿಂಗಳು ಇರುತ್ತಾರೆ. ಆಮೇಲೆ ಬೇರೆಯವರು ಬರುತ್ತಾರೆ. ಇದರಿಂದ ಯಾವ ಮಾಹಿತಿ ಯಾರಲ್ಲಿ ಕೇಳಬೇಕೆಂಬ ಜಿಜ್ಞಾಸೆ ಅಧಿಕಾರಿಗಳಲ್ಲಿ ಹುಟ್ಟಿಕೊಂಡಿದೆ.
ಇದೇ ಪ್ರಕ್ರಿಯೆ ಮುಂದುವರಿಯುತ್ತಿರುವುದರಿಂದ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಂದ ಆಡಳಿತಾತ್ಮಕ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಪಡೆಯಲು ಸಾಕಷ್ಟು ಪರದಾಡುತ್ತಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗಿರುವ ಮಾಹಿತಿ, ಹಾಜರಾತಿ ವಿವರ, ಶುಲ್ಕ ವಿವರ, ಪಠ್ಯಕ್ರಮ, ಪೀಠೊಪಕರಣದ ಮಾಹಿತಿ ಜತೆಗೆ ವಿವಿಧ ಪರಿಕರಗಳ ಮಾಹಿತಿ ಪಡೆಯಲು ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕ್ರೀಡಾ ಶುಲ್ಕ ಬಂದಿಲ್ಲ: ಸರ್ಕಾರಿ ಪಾಲಿಟೆಕ್ನಿಕಲ್ ಕಾಲೇಜುಗಳು ಪ್ರತಿ ವಿದ್ಯಾರ್ಥಿಗಳಿಂದ ವಾರ್ಷಿಕವಾಗಿ 70 ರೂ. ಕ್ರೀಡಾ ಶುಲ್ಕ ಸಂಗ್ರಹಿಸಲಾಗುತ್ತದೆ. ಅದರಲ್ಲಿ 10 ರೂ.ಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸ್ಥಾಪಿಸಿರುವ ಕೇಂದ್ರ ಕ್ರೀಡಾ ನಿಧಿಗೆ ನೀಡಬೇಕು. ಉಳಿದ 60 ರೂ.ಗಳನ್ನು ವಿದ್ಯಾರ್ಥಿಗಳಿಗೆ ಬೇಕಾದ ಕ್ರೀಡಾ ಪರಿಕರ ಖರೀದಿಸಲು ಹಾಗೂ ಕ್ರೀಡೆಗೆ ಸಂಬಂಧಿಸಿದ ಇತರೆ ಚಟುವಟಿಕೆಗೆ ಬಳಸಿಕೊಳ್ಳಲು ಅವಕಾಶ ಇದೆ. ಆದರೆ, ಸುಮಾರು 23 ಪಾಲಿಟೆಕ್ನಿಕ್ ಕಾಲೇಜುಗಳು ಕ್ರೀಡಾ ವಂತಿಗೆಯನ್ನು ಈವರೆಗೂ ನೀಡಿಲ್ಲ.
23 ಕಾಲೇಜುಗಳ ಪೈಕಿ 14 ಕಾಲೇಜುಗಳು 2016 -17ನೇ ಸಾಲಿನ ಕ್ರೀಡಾವಂತಿಗೆ, 4 ಕಾಲೇಜುಗಳು 2014-15, 2015-16 ಹಾಗೂ 2016-17ನೇ ಸಾಲಿನ ಕ್ರೀಡಾ ವಂತಿಗೆ, 3 ಕಾಲೇಜುಗಳು 2015-16 ಹಾಗೂ 2016-17ನೇ ಸಾಲಿನ ಕ್ರೀಡಾ ವಂತಿಗೆ, ಒಂದು ಕಾಲೇಜು 2009ರಿಂದ ಹಾಗೂ ಇನ್ನೊಂದು ಕಾಲೇಜು 2013ರಿಂದ ಕ್ರೀಡಾ ವಂತಿಗೆ ಪಾವತಿಸಲು ಬಾಕಿಯಿದೆ. ಒಟ್ಟಾರೆ 23 ಕಾಲೇಜಿನಿಂದ ಸುಮಾರು 50 ಸಾವಿರದಷ್ಟು ಹಣ ಬರಬೇಕಿದೆ. ಕ್ರೀಡಾವಂತಿಗೆ ನೀಡಿದ ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ, ಬಹುತೇಕ ಕಾಲೇಜಿನಲ್ಲಿ ಪ್ರಾಂಶುಪಾಲರೇ ಇಲ್ಲದಿರುವುದರಿಂದ ಹಣ ಪಾವತಿ ಬಾಕಿ ಉಳಿದಿದೆ.
ರಾಜ್ಯದ 81 ಸರ್ಕಾರಿ ಪಾಲಿಟೆಕ್ನಿಕ್, 44 ಅನುದಾನಿತ ಹಾಗೂ 196 ಅನುದಾನ ರಹಿತ ಪಾಲಿಟೆಕ್ನಿಕ್ ಮತ್ತು 12 ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಸೇರಿ ವಿವಿಧ ಕೋರ್ಸ್‌ಗಳಿಗೆ 2017-18ನೇ ಸಾಲಿನ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಕಾಯಂ ಪ್ರಾಂಶುಪಾಲರ ಕೊರತೆಯಿಂದ ಆಡಳಿತಾತ್ಮಕವಾದ ಅನೇಕ ಅಂಶಗಳು ಬಾಕಿ ಉಳಿದುಕೊಂಡಿದೆ.
ಎರಡು ವರ್ಷದಿಂದ ಪ್ರಾಂಶುಪಾಲರ ನಿವೃತ್ತಿಯಾಗಿ ಖಾಲಿ ಇರುವ ಹುದ್ದೆಗೆ ಭರ್ತಿ ಮಾಡಿಕೊಂಡಿಲ್ಲ. ಹೀಗಾಗಿ ಪ್ರಭಾರಿ ಪ್ರಾಂಶುಪಾಲರಿಂದಲೇ ನಿರ್ವಹಣೆಯಾಗುತ್ತಿದೆ. ಪ್ರಾಂಶುಪಾಲರ ಬಡ್ತಿ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕಾಯಂ ಪ್ರಾಂಶುಪಾಲರನ್ನು ನೇಮಿಸಲಿದ್ದೇವೆ.
-ಎಚ್.ಯು.ತಳವಾರ, ನಿರ್ದೇಶಕ, ತಾಂತ್ರಿಕ ಶಿಕ್ಷಣ