ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡು ಕರ್ತವ್ಯಕ್ಕೆ ಗೈರು ಹಾಜರಾದ 8 ಜನ ತರಬೇತಿ ಸಿಬ್ಬಂದಿ ಹಾಗೂ 23 ಜನ ಖಾಯಂ ಸಿಬ್ಬಂದಿ ಸೇರಿ ಒಟ್ಟು 31 ಜನ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಇಂದು ಆದೇಶ ಹೊರಡಿಸಲಾಗಿದೆ.
ಅಲ್ಲದೇ, ಪ್ರಯಾಣಿಕರ ಹಿತದೃಷ್ಟಿ ಮತ್ತು ಆಡಳಿತಾತ್ಮಕ ಕಾರಣದಿಂದಾಗಿ 53 ಚಾಲನಾ ಸಿಬ್ಬಂದಿ( ಚಾಲಕ ಮತ್ತು ನಿರ್ವಾಹಕ), 20 ತಾಂತ್ರಿಕ ಸಿಬ್ಬಂದಿ ಹಾಗೂ ಇಬ್ಬರು ಆಡಳಿತ ಸಿಬ್ಬಂದಿಯನ್ನು ಬೇರೆ-ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.
ಈಗಾಗಲೇ ನೌಕರರ ಕೋರಿಕೆಯ ಮೇರೆಗೆ ಅವರವರ ಅನುಕೂಲಕ್ಕೆ ತಕ್ಕಂತೆ 122 ಚಾಲನಾ ಸಿಬ್ಬಂದಿ ಹಾಗೂ 27 ಜನ ತಾಂತ್ರಿಕ ಸಿಬ್ಬಂದಿಗೆ ಎರವಲು ಸೇವೆಯ ಮೇಲೆ ನಿಯೋಜಿಸಲಾಗಿತ್ತು. ಆದರೆ, ಈಗ ಸಿಬ್ಬಂದಿಯ ಎರವಲು ಸೇವೆಯ ಆದೇಶವನ್ನು ಹಿಂಪಡೆದು ಮೂಲ ಸ್ಥಳಕ್ಕೆ ನಿಯೋಜಿಸಿ ಆದೇಶಿಸಲಾಗಿದೆ.
ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಗೆ ನಿತ್ಯ 4.50 ಕೋಟಿ ರೂ.ಗಳಷ್ಟು ಆದಾಯದಲ್ಲಿ ಕೊರತೆಯುಂಟಾಗಿರುತ್ತದೆ. ಆದ್ದರಿಂದ ಸಿಬ್ಬಂದಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಕೂಡಲೇ ಹಾಜರಾಗುವಂತೆ ಮತ್ತೊಮ್ಮೆ ಮನವಿ ಮಾಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮಾರಾವ್ ತಿಳಿಸಿದ್ದಾರೆ.
ಮುಷ್ಕರದ ನಡುವೆಯೂ ಶನಿವಾರ ಅಧಿಕಾರಿಗಳು ನೌಕರರ ಮನವೊಲಿಸಿ 270 ಬಸ್ ಗಳ ಕಾರ್ಯಾಚರಣೆ ಮಾಡಿಸಿದ್ದಾರೆ. ಜತೆಗೆ ಪ್ರಯಾಣಿಕರ ತೊಂದರೆ ತಪ್ಪಿಸಲು ಬಸ್ ನಿಲ್ದಾಣಗಳ ಮೂಲಕ 358 ಖಾಸಗಿ ಬಸ್ ಗಳು, ನೆರೆ ರಾಜ್ಯದ ತೆಲಂಗಾಣ ಮತ್ತು ಆಂಧ್ರಪ್ರದೇಶದ 191 ಸಾರಿಗೆ ಬಸ್ ಗಳು ಹಾಗೂ 2757 ಇತರ ಖಾಸಗಿ ವಾಹನಗಳನ್ನು ಬಳಕೆ ಮಾಡಲಾಗಿದೆ