Advertisement

ಗ್ರಾಮ ಅರಣ್ಯ ಸಮಿತಿಗಳಿಗೆ 31.16 ಕೋಟಿ ಲಾಭಾಂಶ ಹಂಚಿಕೆ

06:35 AM Jun 02, 2020 | Suhan S |

ಶಿರಸಿ: ಜಿಲ್ಲೆಯ ಗ್ರಾಮ ಅರಣ್ಯ ಸಮಿತಿಗಳಿಗೆ ಪಾಲಿಸಿದರೆ ಪಾಲು ಯೋಜನೆಯಡಿ ಅರಣ್ಯ ಸಮಿತಿಗಳಿಗೆ ಒಟ್ಟು 31.16 ಕೋಟಿ ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಹೇಳಿದರು.

Advertisement

ಸೋಮವಾರ ತಾಲೂಕಿನ ಮಂಜಗುಣಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶ ನೀಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 636 ಗ್ರಾಮ ಅರಣ್ಯ ಸಮಿತಿಗಳಿದ್ದು, ಅದರಲ್ಲಿ ಹಲವು ಸಮಿತಿಗಳು ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿವೆ. ಪಡೆದ ಲಾಭಾಂಶದ ಮೂಲಕ ಸಂಪನ್ಮೂಲ ಅಭಿವೃದ್ಧಿಯನ್ನು ತಮ್ಮ ಗ್ರಾಮಗಳಲ್ಲಿ ಮಾಡಿವೆ. ಗ್ರಾಮ ಅರಣ್ಯ ಸಮಿತಿಗಳು ಕೇವಲ ನೆಡುತೋಪು ಆದಾಯಕ್ಕಷ್ಟೇ ಅವಲಂಬನೆಯಾಗಿರಬಾರದು. ಉಪ್ಪಾಗೆ ಶೇಖರಣೆ, ಟೂರಿಸ್ಟ್ ಚಟುವಟಿಕೆ ಮುಂತಾದ ಕಾರ್ಯವನ್ನು ನಡೆಸಬೆಕು ಎಂದರು.

ಕೆನರಾ ವೃತ್ತದಲ್ಲಿ 17,321ನೆಡುತೋಪುಗಳಲ್ಲಿ ಹಣ್ಣಿನ ಗಿಡ, ಆಲ, ಅತ್ತಿ, ನೆರಳೆ ಸೇರಿದಂತೆ ನೈಸರ್ಗಿಕ ಗಿಡಗಳನ್ನು ನೆಡಲಾಗುತ್ತಿದೆ. ಈ ಬಾರಿ ಇದಕ್ಕಾಗಿ 1.48 ಕೋಟಿ ಗಿಡಗಳನ್ನು ತಯಾರಿಸಲಾಗಿದೆ ಎಂದರು. ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಏಕಜಾತಿಯ ನೆಡುತೋಪುಗಳನ್ನು ಬೆಳೆಸುವುದನ್ನು ಬಿಟ್ಟು ನೈಸರ್ಗಿ ಅರಣ್ಯ ಸಂಪತ್ತುಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಒತ್ತು ನೀಡಬೇಕು. ಘಟ್ಟದ ಮೇಲಿನ ತಾಲೂಕುಗಳಲ್ಲಿ ಏಕಜಾತಿಯ ಗಿಡಗಳನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಅದರ ಬದಲು ನೈಸರ್ಗಿಕವಾದ ವಿವಿಧ ಗಿಡಗಳನ್ನು ಬೆಳೆಸಲು ಮುಂದಾಗಬೇಕು. ಈ ಬಗ್ಗೆ ಗ್ರಾಮ ಅರಣ್ಯ ಸಮಿತಿಗಳು ಹೊಣೆಗಾರಿಕೆ ತೋರಬೇಕು ಎಂದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ವೇಳೆ ಮಂಜುಗುಣಿ ಗ್ರಾಪಂ. ನೂತನ ಕಟ್ಟಡ ಹಾಗೂ ಗ್ರಾಮ ಅರಣ್ಯ ಸಮಿತಿಯ ನೂತನ ಕಟ್ಟಡ ಹಾಗೂ ದೇವರಕಾಡು ವನ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಡಿಎಫ್‌ಒ ಎಸ್‌.ಜಿ. ಹೆಗಡೆ ಸೇರಿದಂತೆ ಇತರರು ಇದ್ದರು. ಎಸಿಎಫ್‌ ರಘು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next