ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಇನ್ನಷ್ಟು ಹೆಚ್ಚಳವಾಗಿದೆ. ಇಂದು ರಾಜ್ಯದಲ್ಲಿ ಮತ್ತೆ 308 ಜನರಿಗೆ ಸೋಂಕು ತಾಗಿರುವುದು ದೃಢವಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 5760ಕ್ಕೆ ಎರಿಕೆಯಾಗಿದೆ.
ಇಂದು ಕೂಡಾ ಮಹಾರಾಷ್ಟ್ರ ರಾಜ್ಯದಿಂದ ಬಂದವರಲ್ಲೇ ಹೆಚ್ಚಿನ ಪ್ರಮಾಣದ ಸೋಂಕು ಕಾಣಿಸಿಕೊಂಡಿದೆ. ಇಂದು ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 99 ಜನರಿಗೆ ಸೋಂಕು ಕಾಣಿಸಿಕೊಂಡರೆ, ಯಾದಗಿರಿ ಜಿಲ್ಲೆಯಲ್ಲಿ 66 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.
ಉಡುಪಿ ಜಿಲ್ಲೆಯಲ್ಲಿ 45 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಬೀದರ್ ಜಿಲ್ಲೆಯಲ್ಲಿ 48 ಜನರಿಗೆ ಸೋಂಕು ತಾಗಿದೆ. ಬೆಂಗಳೂರು ನಗರದಲ್ಲಿ 18 ಮಂದಿಗೆ, ಬಳ್ಳಾರಿಯಲ್ಲಿ ಎಂಟು ಜನರಿಗೆ, ಗದಗದಲ್ಲಿ ಆರು, ಶಿವಮೊಗ್ಗ ಮತ್ತು ಧಾರವಾಡದಲ್ಲಿ ತಲಾ ನಾಲ್ವರಿಗೆ ಸೋಂಕು ತಾಗಿದೆ.
ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಮೂರು ಸೋಂಕು ಪ್ರಕರಣಗಳು, ಬಾಗಲಕೋಟೆಯಲ್ಲಿ ಎರಡು, ಕೊಪ್ಪಳ ಮತ್ತು ರಾಮನಗರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.
ರಾಜ್ಯದಲ್ಲಿ ಇಂದು ಮೂವರು ಕೋವಿಡ್ -19 ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760 ಕ್ಕೆ ಏರಿಕೆಯಾಗಿದೆ. ಇಂದು 387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಇದುವರೆಗೆ ಒಟ್ಟು 2519 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಒಟ್ಟು 64 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದು, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.