ಕೆಲವರಿಗೆ ಪ್ರಕೃತಿ ಮೇಲೆ ಅಪಾರ ಪ್ರೀತಿ. ಮಕ್ಕಳಂತೆ ಗಿಡಗಳನ್ನು ನೆಟ್ಟು,ನೀರು ಹಾಕಿ ಪೋಷಿಸುವುದು,ಅವುಗಳನ್ನು ಆರೈಕೆ ಮಾಡಿ, ಗೊಬ್ಬರ ಮಣ್ಣು ಹಾಕುವುದು, ಗಿಡವನ್ನು ಮರವಾಗಿ ಮಾಡುವುದು. ಒಟ್ಟಿನಲ್ಲಿ ತಾಯಿಯಂತೆ ನೆಟ್ಟ ಗಿಡಗಳನ್ನು ನೋಡಿಕೊಳ್ಳುವುದು ಪ್ರಕೃತಿ ಪ್ರೇಮಿಯ ಲಕ್ಷಣ. ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ವಯಸ್ಸು 75 ದಾಟಿದರೂ ಅವರಿಗೆ ಪ್ರಕೃತಿಯ ಮೇಲೆ ಅಪಾರ ಪ್ರೀತಿ. ಗಿಡಗಳನ್ನು ನೆಟ್ಟು ಅವುಗಳ ದಿನಚರಿಯನ್ನು ನೋಡುವುದು ಅಂದರೆ ಇವರಿಗೆ ದಿನನಿತ್ಯದ ಕಾಯಕ. ಇವರು ಪರಿಸರದ ಮಹಾನ್ ಪ್ರೇಮಿ.
ಒಡಿಶಾದ ಕಂಟಿಲೊ ಗ್ರಾಮದ ಮುದಿ ಜೀವ ಈ ಅಂತರ್ಯಾಮಿ. ಬಾಲ್ಯದಲ್ಲಿ ಅಂದರೆ ತನ್ನ 11 ನೇ ವಯಸ್ಸಿನಲ್ಲಿ ಅದೊಂದು ದಿನ ಅಂತರ್ಯಾಮಿ ಆಲದ ಗಿಡವೊಂದನ್ನು ತನ್ನ ಮನೆಯಂಗಳದಲ್ಲಿ ನೆಡುತ್ತಾರೆ. ಆ ಗಿಡಕ್ಕೆ ನೀರು ಹಾಕಿ, ಅದರ ಬಾಲ್ಯ, ಯೌವನ, ಮುದಿತನವನ್ನು ಕಾಯುತ್ತಾ, ಅದನ್ನು ಸಾಕಿ ಮರವಾಗಿ ಕಾಪಾಡುವಲ್ಲಿ ಅಂತರ್ಯಾಮಿ ಯಶಸ್ವಿಯಾಗುತ್ತಾರೆ. ಪ್ರತಿ ವರ್ಷ ಗಿಡ ನೆಟ್ಟು ಪೋಷಿಸುವ ಅಂತರ್ಯಾಮಿ ಅವರ ಹವ್ಯಾಸಕ್ಕೆ ಶಿಕ್ಷಕ ವೃತ್ತಿ ಜತೆಯಾಗುತ್ತದೆ. ಶಿಕ್ಷಕ ವೃತ್ತಿಯಲ್ಲಿ ಮಕ್ಕಳಲ್ಲಿ ಪರಿಸರದ ಉಳಿವಿನ ಬಗ್ಗೆ ಜಾಗೃತಿ ಪಾಠವನ್ನು ಮಾಡುವುದು ಮಾತ್ರವಲ್ಲದೆ. ಶಾಲೆಯ ಹಿತ್ತಲಿನಲ್ಲಿ ನೂರಾರು ಗಿಡಗಳನ್ನು ನೆಡಲು ಶುರು ಮಾಡುತ್ತಾರೆ. ಖಾಲಿ ಜಮೀನುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಂತರ್ಯಾಮಿ ನೆಟ್ಟ ಗಿಡಗಳು ಮರವಾಗಿ ಬೆಳೆದು ನಿಲ್ಲುತ್ತವೆ. ಈ ಪ್ರಕೃತಿ ಪ್ರೇಮ ಅವರನ್ನು ಊರಿನಲ್ಲಿ ‘ಗಚ್ಚಾ’ ಸರ್ ಎಂದು ಹೆಸರಿನಿಂದ ಎಲ್ಲರೂ ಕರೆಯುವಂತೆ ಮಾಡುತ್ತದೆ. ಗಚ್ಚಾ ಎಂದರೆ ಒಡಿಯಾದಲ್ಲಿ ಮರ ಎಂದು ಅರ್ಥ.
1973 ರಲ್ಲಿ ಪ್ರಾಥಮಿಕ ಶಾಲೆಯೊಂದಕ್ಕೆ ಶಿಕ್ಷಕನಾಗಿ ಸೇರಿಕೊಂಡ ಅವರು, ವರ್ಗಾವಣೆ ಆಗುತ್ತಾ ಒಟ್ಟು 6 ಶಾಲೆಗಳಲ್ಲಿ ಗಿಡಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ನರ್ಸರಿಯ ಹಾಗೆ ಒಂದರ ನಂತರ ಒಂದು ಗಿಡಗಳನ್ನು ಒಟ್ಟು ಮಾಡಿ ನೆಡುತ್ತಾ ಬಂದೆ ಎನ್ನುತ್ತಾರೆ ಅಂತರ್ಯಾಮಿ. 2004 ರಿಂದ 10 ಸಾವಿರ ಸೆಸಿಗಳನ್ನು ನೆಟ್ಟಿರುವ ಅಂತರ್ಯಾಮಿ. ವಿದ್ಯಾರ್ಥಿಗಳ ಜತೆಗೊಡಿ 20 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಒಟ್ಟು ಇದುವರೆಗೆ 30 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ತೇಗ, ಆಲ, ಮಾವು, ಭಾರತೀಯ ಬೀಲ್, ಅಂಜೂರ ಮತ್ತು ಇತರ ಸ್ಥಳೀಯ ತಳಿಗಳಂತಹ ಸಸಿಗಳನ್ನು ನೆಡಲು ಅವರು ಒತ್ತು ನೀಡಿದರು. ಇವರ ಪಯಣ ಇಲ್ಲಿಗೆ ನಿಲ್ಲಿಲ್ಲ. ವಯಸ್ಸು 75 ದಾಟಿದರೂ ಇಂದಿಗೂ ಗಿಡಗಳನ್ನು ನೆಡುವುದು ಇವರಿಗೆ ಆಯಾಸವಾಗದ ಕೆಲಸ.
ಇಷ್ಟು ಮಾತ್ರವಲ್ಲದೆ ಅಂತರ್ಯಾಮಿ ಕಾಡುಗಳನ್ನು ಉಳಿಸಬೇಕು. ಅಲ್ಲಿರುವ ಪ್ರಾಣಿ- ಪಕ್ಷಿಗಳನ್ನು ಉಳಿಸಬೇಕು, ಕಾಡ್ಗಿಚ್ಚಿನಂಥ ಘಟನೆಗಳನ್ನು ಆದಷ್ಟು ತಡೆಯಬೇಕು ಎನ್ನುವ ಪ್ರಯತ್ನದಲ್ಲಿ ಅರಣ್ಯ ಅಧಿಕಾರಿಗಳ ಜತೆ ನಿರಂತರವಾಗಿ ಚರ್ಚಿಸಿದ್ದಾರೆ. ಗಿಡಗಳನ್ನು ಬೆಳೆಸಬೇಕು, ಅವುಗಳನ್ನು ಉಳಿಸಬೇಕು ಅದಕ್ಕಾಗಿ ಯಾವ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಿಂದಲೂ ಅಂತರ್ಯಾಮಿ, ಪೋಸ್ಟರ್ ಗಳನ್ನು ಮಾಡಿ, ಅವುಗಳ ಮೇಲೆ ಪರಿಸರದ ಕುರಿತು ಜಾಗೃತಿಯನ್ನು ಮೂಡಿಸುವ ಬರಹಗಳನ್ನು ಬರೆದು ಗ್ರಾಮದ ಬೀದಿಯಲ್ಲಿ, ಊರ ರಸ್ತೆ ಬದಿಯಲ್ಲೂ ಅಂಟಿಸಿ, ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕಾಯಕ್ಕೆ ಹಲವಾರು ಸಂಘ- ಸಂಸ್ಥೆಗಳು, ವಿದ್ಯಾರ್ಥಿಗಳು ಜತೆಯಾಗುತ್ತಿದ್ದಾರೆ.
ಗಿಡಗಳನ್ನು ನೆಡುವ ಜತೆಗೆ ಸೆಸಿಗಳ ಬೀಜ ವಿತರಣೆಯನ್ನು ಮಾಡುತ್ತಾರೆ. 30 ಸಾವಿರ ಗಿಡಗಳನ್ನು ನೆಟ್ಟಿರುವ ಇವರು ಅವುಗಳನ್ನು ಪ್ರದೇಶವಾರಿನಂತೆ ಡಾಕ್ಯುಮೆಂಟೇಷನ್ ಆಗಿ ಕಾಪಾಡಿಕೊಂಡಿದ್ದಾರೆ ಅಂತೆ.
– ಸುಹಾನ್ ಶೇಕ್