ನವದೆಹಲಿ/ ಬೆಂಗಳೂರು: “ಬಜಾಜ್ ಆಟೋ ಲಿಮಿಟೆಡ್’ ಸಂಸ್ಥೆ ತನ್ನ “2019- 20ನೇ ವರ್ಷದ ಆರ್ಥಿಕ ಪ್ರಗತಿಯ ವರದಿ’ಯನ್ನು ಭಾನುವಾರ ಪ್ರಕಟಿಸಿದೆ. ಆ ವರ್ಷದಲ್ಲಿ ಭಾರತದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ರಂಗದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಆ ವರ್ಷ 29,919 ಕೋಟಿ ರೂ. ಆದಾಯ ಗಳಿಸಿರುವುದಾಗಿ ಕಂಪನಿ ತಿಳಿಸಿದೆ.
2019-20ರ ವರ್ಷದಲ್ಲಿ ಎಬಿಟಾ (ತೆರಿಗೆ, ಬಡ್ಡಿ ರಹಿತ ಆದಾಯ ಲೆಕ್ಕಾಚಾರ) ಗುರಿಯಡಿ, ಕಂಪನಿಯು 5,253 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆ ನಿರೀಕ್ಷೆಯನ್ನೂ ಮೀರಿ, ಕಂಪನಿಯು 6,580 ಕೋಟಿ ರೂ. ಪಿಬಿಟಿ (ತೆರಿಗೆ ಪೂರ್ವ ಲಾಭ) ಗಳಿಸಿದೆ. ಜೊತೆಗೆ, ಅದೇ ಸಮಯದಲ್ಲಿ ದೇಶೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲು ಸ್ಥಾಪಿಸಿರುವುದಾಗಿ ಕಂಪನಿ ತಿಳಿಸಿದೆ.
“2001ರಲ್ಲಿ ಪಲ್ಸರ್ ಎಂಬ ಕ್ರೀಡಾ ಬೈಕನ್ನು ಬಿಡುಗಡೆ ಮಾಡುವ ಮೂಲಕ ಆ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಂಪನಿ, ಆನಂತರ ಪಲ್ಸರ್‌ನ ಹಲವಾರು ಆವೃತ್ತಿಗಳನ್ನು ಬಿಡುಗಡೆ ಮಾಡಿ ಸೈ ಎನ್ನಿಸಿಕೊಂಡಿತ್ತು. 2019- 20ರಲ್ಲಿ ಪಲ್ಸರ್ 125 ಸಿಸಿ ಬೈಕ್ ಬಿಡುಗಡೆ ಮಾಡಿ ಯಶಸ್ವಿಯಾಗುವುದರ ಜೊತೆಗೆ, ಡೊಮಿನಾರ್ 250 ಎಂಬ ಮತ್ತೂಂದು ಕ್ರೀಡಾ ಬೈಕನ್ನು ಬಿಡುಗಡೆ ಮಾಡಿ ಜನಪ್ರಿಯತೆ ಸಂಪಾದಿಸಿತು. ಇಂಟ್ರಾ ಸಿಟಿ ವಾಣಿಜ್ಯ ವಿಭಾಗದಲ್ಲಿ ಪರಿಚಯಿಸಲಾಗಿದ್ದ “ಬಜಾಜ್ ಮ್ಯಾಕ್ಸಿಮಾ 3 ವ್ಹೀಲರ್ ಪ್ಯಾಸೆಂಜರ್’ ವಾಹನ ಯಶಸ್ವಿಯಾಗಿದ್ದರೆ, ಕ್ವಾಡ್ರೈಸೈಕಲ್ ವಿಭಾಗದಲ್ಲಿ ಬಿಡುಗಡೆ ಮಾಡಲಾದ ವಾಹನ ಉಬರ್ ಕ್ಯಾಬ್ ಸೇವೆಗಳ ಅಡಿಯಲ್ಲಿ ಬೆಂಗಳೂರಿಗರಿಗೆ ಕೈಗೆಟಕುವ ಬೆಲೆಯಲ್ಲಿ ಪ್ರಯಾಣ ಸೇವೆಗಳ ನ್ನು ನೀಡುತ್ತಿದೆ’ ಎಂದು ಕಂಪನಿ ವಿವರಿಸಿದೆ.
ರಫ್ತಿನ ವಿಚಾರಕ್ಕೆ ಬರುವುದಾದರೆ, ಕಂಪನಿಯು 2019-20ರ ವರ್ಷದಲ್ಲಿ 11,845 ಕೋಟಿ ರೂ.ಗಳ ರಫ್ತು ವಹಿವಾಟು ನಡೆಸಿದೆ. ತನ್ನ ಉತ್ಪಾದನೆಯ ಶೇ. 49ರಷ್ಟನ್ನು 79ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಕಂಪನಿ ಹೆಮ್ಮೆ ವ್ಯಕ್ತಪಡಿಸಿದೆ.