ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವಂತೆ ಹೆಚ್ಚುವರಿ 3,000 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಶನಿವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಉನ್ನತ ಶಿಕ್ಷಣಕ್ಕೆ ಸದ್ಯ 4,333 ಕೋಟಿ ರೂ. ಅನುದಾನ ಇದ್ದು, ಹೆಚ್ಚುವರಿ 3 ಸಾವಿರ ಕೋಟಿ ರೂ.ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಬೇಡಿಕೆ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಬಜೆಟ್ ಪೂರ್ವ ಭಾವಿ ಸಭೆ ನಂತರ ಡಾ. ಅಶ್ವತ್ಥನಾರಾಯಣ ಮಾಧ್ಯಮದವರಿಗೆ ತಿಳಿಸಿದರು.
ಸಂಶೋಧನಾ ನಿಧಿಗೆ ಬೇಡಿಕೆ, ಶಿಕ್ಷಕರ ತರಬೇತಿ, ತರಬೇತುದಾರರಿಗೆ ತರಬೇತಿ, ಹೊಸ ಬಿ.ಇಡಿ ಕಾರ್ಯಕ್ರಮ, 10 ಹೊಸ ಪದವಿ ಕಾಲೇಜು, 10 ಹೊಸ ಡಿಪ್ಲೊಮಾ ಕಾಲೇಜು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ, ಕ್ರೀಡಾ ತರಬೇತಿ, ಫಿಟ್ ಇಂಡಿಯಾ ಯೋಜನೆ ಅನುಷ್ಠಾನ ಸೇರಿ ಪ್ರತಿ ಜಿಲ್ಲೆಗೂ ಹೊಸ ಬಿ.ಇಡಿ ಕಾಲೇಜು ಸ್ಥಾಪನೆ ಸಂಬಂಧ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಹಾಲಿ ಇರುವ ಪದವಿ ಕಾಲೇಜುಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಉದ್ದೇಶವಿದೆ. ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲು ಆಯಾ ಕಾಲೇಜುಗಳ ಬೇಡಿಕೆಗೆ ಅನುಗುಣವಾಗಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
4 ವರ್ಷಗಳ ಏಕೀಕೃತ ಬಿ.ಇಡಿ ಕೋರ್ಸ್ ಆರಂಭಕ್ಕೆ ರಾಷ್ಟ್ರೀಯ ಶಿಕ್ಷಣ ಪರಿಷತ್‌ಗೆ ಮನವಿ ಸಲ್ಲಿಸುತ್ತೇವೆ. 2021 ಜೂನ್‌ನಿಂದ ಹೊಸ ಕೋರ್ಸ್ ಆರಂಭಿಸುವ ಉದ್ದೇಶವಿದೆ. ಜತಗೆ, ತಾಂತ್ರಿಕ ಸಮಿತಿಯ ಶಿಫಾರಸಿನ ಅನ್ವಯ ಡಿಪ್ಲೊಮಾ ಕೋರ್ಸ್‌ನಲ್ಲಿ ಸುಧಾರಣೆ ತರಲು ಉದ್ದೇಶಿಸಿದ್ದೇವೆ. ಪಠ್ಯಕ್ರಮ ಸರಳಗೊಳಿಸಿ, ಪರಿಣಾಮಕಾರಿಯಾದ ಕೋರ್ಸ್ ಪರಿಚಯಿಸಲು ಉದ್ದೇಶಿಸಿದ್ದೇವೆ ಎಂದು ಸಚಿವರು ತಿಳಿಸಿದರು.