ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಿದರು. ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಉಚಿತ ವಿದ್ಯುತ್ ನೀಡುವ ದೊಡ್ಡ ಘೋಷಣೆ ಮಾಡಿದ್ದಾರೆ.
ಇಂದಿನ ಬಜೆಟ್ ನಲ್ಲಿ ಹಣಕಾಸು ಸಚಿವೆ ದೇಶದಲ್ಲಿ ಸೌರಶಕ್ತಿಗೆ ಹೆಚ್ಚಿನ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. ಇದರೊಂದಿಗೆ ದೇಶದಲ್ಲಿ ದುಬಾರಿ ವಿದ್ಯುತ್ ಸಮಸ್ಯೆ ನೀಗಿಸಲು ಪ್ರಯೋಜನವಾಗಲಿದೆ ಎಂದು ಸಲಹೆಯನ್ನು ನೀಡಿದ್ದಾರೆ.
ಮನೆಯ ಮೇಲ್ಛಾವಣಿಗೆ ಸೌರಶಕ್ತಿ ಬಳಸುವ ಮೂಲಕ ಉಚಿತ ವಿದ್ಯುತ್ ಅನ್ನು ಘೋಷಿಸಿದ ಸಚಿವೆ, ರೂಫ್‌ಟಾಪ್ ಸೋಲಾರ್ ತಂತ್ರಜ್ಞಾನದ ಮೂಲಕ ಒಂದು ಕೋಟಿ ಕುಟುಂಬಗಳು ತಿಂಗಳಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು ಅಷ್ಟುಮಾತ್ರವಲ್ಲದೆ ಈ ಯೋಜನೆಯಿಂದ ದೇಶದ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿಯಲ್ಲಿ ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಅಳವಡಿಸುವ ಕೇಂದ್ರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಘೋಷಿಸಿದ್ದರು. ಈ ಯೋಜನೆಯ ಉದ್ದೇಶವು ಮೇಲ್ಛಾವಣಿ ಸೌರೀಕರಣದ ಮೂಲಕ ಕಡಿಮೆ ಮತ್ತು ಮಧ್ಯಮ ಆದಾಯದ ವ್ಯಕ್ತಿಗಳಿಗೆ ವಿದ್ಯುತ್ ಅನ್ನು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದನೆಯ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುವುದಾಗಿದೆ.
ಯೋಜನೆ ಜಾರಿಗೊಳಿಸಲು ರಾಷ್ಟ್ರ ಮಟ್ಟದ ಅಭಿಯಾನವನ್ನು ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಅರಿವು ಮೂಡಿಸಲು ಬೃಹತ್ ರಾಷ್ಟ್ರೀಯ ಮಟ್ಟದ ಅಭಿಯಾನವೂ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 166 ಕೋಟಿ ಕೊಟ್ಟು ಖರೀದಿಸಿದ ಮನೆಯಲ್ಲಿ ನೀರು ಸೋರಿಕೆ; ಮನೆ ಖಾಲಿ ಮಾಡಿದ ಪ್ರಿಯಾಂಕ ದಂಪತಿ