ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಕುಗ್ರಾಮವೊಂದರಲ್ಲಿ ಕೆತ್ತಲ್ಪಟ್ಟಿರುವ ಬೃಹತ್ ಏಕಶಿಲಾ ವಿಶ್ವರೂಪ ಮಹಾವಿಷ್ಣು ಪ್ರತಿಮೆಯನ್ನು ಬೆಂಗಳೂರಿಗೆ ತರಲು ಕಳೆದ ಎರಡು ವರ್ಷಗಳಿಂದ ಹರಸಾಹಸ ಪಡುತ್ತಿದ್ದು, ಕೊನೆಗೂ ಭಾರೀ ಗಾತ್ರದ ಪ್ರತಿಮೆಯನ್ನು ಸಾಗಿಸುವ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ ಎಂದು ವರದಿ ತಿಳಿಸಿದೆ.
ತಿರುವಣ್ಣಾಮಲೈನಿಂದ ಬೆಂಗಳೂರಿಗೆ ಸಾಗಿಸಬೇಕೆಂದಿದ್ದ 64 ಅಡಿ ಎತ್ತರದ ಮಹಾವಿಷ್ಣುವಿನ ಪ್ರತಿಮೆಯನ್ನು ಕೊನೆಗೂ 240 ಟಯರ್ ಹೊಂದಿರುವ ಟ್ರೈಲರ್(ಅತೀ ಉದ್ದನೆಯ ಲಾರಿ) ಗೆ ಲೋಡ್ ಮಾಡಲಾಗಿದೆ. ಏತನ್ಮಧ್ಯೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಲಾರಿಯ ಚಕ್ರಗಳು ಮಣ್ಣಿನಲ್ಲಿ ಹುದುಗಿಕೊಂಡಿದ್ದು, ಜಲ್ಲಿಕಲ್ಲುಗಳನ್ನು ಸುರಿದು ಟ್ರೈಲರ್ ನ ಚಕ್ರ ಮಣ್ಣಿನಿಂದ ಮೇಲೆ ಬರುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಪ್ರತಿಮೆಯ ಮೂಲ ತೂಕ 380 ಟನ್ ಗಳಷ್ಟು ಇದ್ದಿದ್ದು, ಬಳಿಕ ಶಿಲ್ಪಿಗಳು ಅದನ್ನು 80ರಿಂದ 90ಟನ್ ಗೆ ಇಳಿಸುವ ಮೂಲಕ ಭಾರೀ ತೂಕವನ್ನು ಕಡಿಮೆಗೊಳಿಸಿದ್ದಾರೆ. ನಾವು ಆದಷ್ಟು ಶೀಘ್ರ ಇಲ್ಲಿಂದ ಪ್ರತಿಮೆಯನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬೆಂಗಳೂರಿನ ಕೋದಂಡರಾಮಸ್ವಾಮಿ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ಡಾ.ಸದಾನಂದ ಅವರು ಟೈಮ್ಸ್ ಆಫ್ ಇಂಡಿಯಾದ ಜತೆ ಮಾತನಾಡುತ್ತ ತಿಳಿಸಿದ್ದಾರೆ.