Advertisement

ಕೆರೆ ತುಂಬಿಸಲು 300 ಕೋಟಿ ಘೋಷಣೆ

06:53 AM Feb 09, 2019 | Team Udayavani |

ಬೀದರ: ಅನೇಕ ವರ್ಷಗಳಿಂದ ಬರಕ್ಕೆ ತುತ್ತಾಗುತ್ತಿರುವ ಬೀದರ್‌ ಜಿಲ್ಲೆಗೆ ಮೈತ್ರಿ ಸರ್ಕಾರ ಎರಡನೇ ಬಜೆಟ್‌ನಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ 300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿರುವುದು ಜಿಲ್ಲೆಯ ಜನರಿಗೆ ಸಂತಸ ಮೂಡಿಸಿದೆ.

Advertisement

ನೀರಾವರಿ ಯೋಜನೆಗಳು: ಬೀದರ ಜಿಲ್ಲೆಯ ಎಲ್ಲ ಕೆರೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ 300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಅಂತರ್ಜಲ ಹೆಚ್ಚಿಸುವ ಯೋಜನೆ ಇದಾಗಿದೆ. ಹಂತ ಹಂತವಾಗಿ ಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವ ಮೂಲಕ ಬರ ಪೀಡಿತ ಜಿಲ್ಲೆ ಪಟ್ಟಿಯಿಂದ ದೂರು ಇರಿಸುವ ಪ್ರಯತ್ನ ಮಾಡಿದೆ. ಅಲ್ಲದೆ, ಕಾರಂಜಾ ಜಲಾಶಯ ಎಡ ಮತ್ತು ಬಲ ದಂಡೆ ಕಾಲುವೆಗಳ ಆಧುನೀಕರಣಕ್ಕೆ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕೂಡ ಅನುದಾನ ಘೋಷಣೆಯಾಗಿ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಮತ್ತೆ ಸರ್ಕಾರ ಕಾಲುವೆಗಳ ಆಧುನೀಕರಣಕ್ಕೆ ಮುಂದಾಗಿದೆ. ಅನೇಕ ದಶಕಗಳಿಂದ ಕಾಮಗಾರಿ ನಡೆಯುತಲ್ಲೆ ಇದ್ದು, ಇಂದಿಗೂ ಯೋಜನೆ ಪೂರ್ಣಗೊಳ್ಳದಿರುವುದು ಅನೇಕ ಅನುಮಾನಗಳು ಹುಟ್ಟುವಂತೆ ಮಾಡಿದೆ.

ಏತ ನೀರಾವರಿಗೆ 20 ಕೋಟಿ: ಮಾಂಜ್ರಾ ನದಿಯ ಏತ ನೀರಾವರಿಗಾಗಿ ಸರ್ಕಾರ 20 ಕೋಟಿ ಅನುದಾನ ಘೋಷಣೆ ಮಾಡಿದೆ. ಆದರೆ, ಜಿಲ್ಲೆಯಿಂದ ಹರಿದು ಹೋಗುವ ಗೋದಾವರಿ ನೀರಿನ ಪಾಲನ್ನು ಸೂಕ್ತವಾಗಿ ಜಿಲ್ಲೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಸಮಿತಿಯೊಂದನ್ನು ರಚನೆ ಮಾಡಿ, ಜಿಲ್ಲೆಯ ರೈತರಿಗೆ ನೀರು ಒದಗಿಸುವ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿಲ್ಲ.

ಗುರುದ್ವಾರಕ್ಕೆ 10 ಕೋಟಿ : ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಗುರುನಾನಕ್‌ ದೇವ್‌ ಜೀರಾ ಗುರುದ್ವಾರಕ್ಕೆ, 550ನೇ ಜಯಂತಿ ಆಚರಣೆಗೆ ಮೈತ್ರಿ ಸರ್ಕಾರ ವಿಶೇಷ 10 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಸಿಖ್‌ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಪ್ರತಿ ವರ್ಷ ಜಯಂತಿ ಸಂದರ್ಭದಲ್ಲಿ ದೇಶ, ವಿದೇಶದ ಲಕ್ಷಾಂತ ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಗುರುನಾನಕ್‌ ಜಯಂತಿಗೆ ವಿಶೇಷ ಅನುದಾನ ಘೋಷಣೆ ಮಾಡಿರುವುದಕ್ಕೆ ಸಮುದಾಯದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಕ್ಷೇತ್ರ: ಜಿಲ್ಲೆಯವರೆ ಕ್ರೀಡಾ ಸಚಿವರಾಗಿರುವ ಕಾರಣ ಈ ಬಾರಿ ಕ್ರೀಡಾ ವಲಯದಲ್ಲಿ ಜಿಲ್ಲೆಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಹೊಸ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕಾಗಿ ಒಟ್ಟು ಐದು ಜಿಲ್ಲೆಗಳು ಸೇರಿ 12.5 ಕೋಟಿ ಅನುದಾನ ಒದಗಿಸುವ ಘೋಷಣೆ ಮಾಡಿದೆ. ಅಲ್ಲದೆ, ಬೀದರ್‌ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಮೇಲ್ದರ್ಜೆಗೆ ಏರಿಸುವ ನಿರ್ಣಯ ಘೋಷಣೆ ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಹಿಂದೆ ಉಳಿದುಕೊಂಡಿದ್ದು, ಇನ್ನೂ ಹೆಚ್ಚಿನ ನಿರೀಕ್ಷೆಗಳನ್ನು ಕ್ರೀಡಾಪಟುಗಳು ಇಟ್ಟುಕೊಂಡಿದ್ದರು.

Advertisement

ಹೊಸ ಕಾರಾಗೃಹ: ಕಾರಾಗೃಹಗಳ ಸಾಮರ್ಥ್ಯ ಮೀರಿ ಕೈದಿಗಳನ್ನು ತುಂಬುತ್ತಿರುವ ಹಿನ್ನೆಲೆಯಲ್ಲಿ ಬೀದರ ಹೊರವಲದಲ್ಲಿ 100 ಕೋಟಿ ವೆಚ್ಚದಲ್ಲಿ ಸುಮಾರು 1000 ಬಂಧಿಗಳ ಸಾಮರ್ಥ್ಯವುಳ್ಳ ವಿಶಿಷ್ಟ ಕಾರಾಗೃಹ ನಿರ್ಮಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಸಧ್ಯ ಜೈಲು ನಿರ್ಮಾಣಕ್ಕೆ ನೌಬಾದ್‌ ಹೊರವಲ ಹಾಗೂ ಕೋಳಾರ ಸಮೀಪದಲ್ಲಿ ಭೂಮಿ ಕೂಡ ಇದೆ.

ವಿಮಾನ ಯಾನ: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಾಗರಿಕ ವಿಮಾನಯಾನ ಪ್ರಾರಂಭ ಕುರಿತು ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2019-20ನೇ ಸಾಲಿನಲ್ಲಿ ಪ್ರಾರಂಭಿಸುವ ಹೊಸ ಭರವಸೆ ನೀಡಿದ್ದಾರೆ. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌ ಕಟ್ಟಡ ಅಭಿವೃದ್ಧಿಗೆ 32 ಕೋಟಿ ಅನುದಾನ ಘೊಷಣೆ ಮಾಡಿದ್ದು, ಜಿಎಂಆರ್‌ ಕಂಪನಿಯೊಂದಿಗೆ ಒಳಂಬಡಿಕೆ ಮಾಡಿಕೊಳ್ಳುವ ಭರವಸೆ ನೀಡಲಾಗಿದೆ. ಕಳೆದ ಆರು ತಿಂಗಳಿಂದ ಜಿಲ್ಲೆಯ ಸಚಿವರು ಹಾಗೂ ಸಂಸದರು ಜಿಎಂಆರ್‌ ಕಂಪನಿಯೊಂದಿಗೆ ಒಳಂಬಡಿಕೆ ನಡೆಯುತ್ತಿದೆ ಎಂದು ಹತ್ತಾರು ಬಾರಿ ಹೇಳಿಕೆ ನೀಡಿದ್ದರೂ ಕೂಡ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಮುಖ್ಯಮಂತ್ರಿಗಳೇ ಹೊಸ ಭರವಸೆ ಮೂಡಿಸಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಿಂದ ವಿಮಾನ ಹಾರಾಟ ನಡೆಯುತ್ತದೆ ಎಂಬ ಭರವಸೆ ಜಿಲ್ಲೆಯ ಜನರದಾಗಿದೆ.

ಈಡೇರದ ನಿರೀಕ್ಷೆಗಳು: ಮೈತ್ರಿ ಸರ್ಕಾರದ ಎರಡನೇ ಬಜೆಟ್ ಪೂರ್ವದಲ್ಲಿ ಜಿಲ್ಲೆ ಮೂರು ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಜ.30ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜಿಲ್ಲೆಗಾಗಿ ವಿಶೇಷ ಯೋಜನೆಗಳನ್ನು ಕೊಡುಗೆಯಾಗಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ಮನವಿ ಪತ್ರದಲ್ಲಿಯ ಕೆಲವು ಯೋಜನೆ ಬಿಟ್ಟರೆ ಬಹುತೇಕ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆ ಆಗಿಲ್ಲ.

ಏನಿತ್ತು ಮನವಿಯಲ್ಲಿ?: ಜಿಲ್ಲೆಯ ಶರಣರ ನಾಡಾದ ಬಸವಕಲ್ಯಾಣದ ಐತಿಹಾಸಿಕ ಸ್ಥಳದಲ್ಲಿ 12ನೇ ಶತಮಾನದ ಬಸವೇಶ್ವರರು ಶರಣರೊಂದಿಗೆ ಸಮ-ಸಮಾಜದ ನಿರ್ಮಾಣಕ್ಕಾಗಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ ಪುಣ್ಯ ಭೂಮಿಯಾಗಿದ್ದು, ವಿಶ್ವದ ಮೊದಲನೆಯ ಸಂಸತ್ತು ನಿರ್ಮಾಣಗೊಂಡ ಹೆಗ್ಗಳಿಕೆ ಅನುಭವ ಮಂಟಪಕ್ಕಿದೆ. ಅದೇ ಮಾದರಿಯಲ್ಲಿ ವಿನೂತನ ಅನುಭವ ಮಂಟಪ ನಿಮಾರ್ಣಕ್ಕೆ ಕನಿಷ್ಠ 250 ಕೋಟಿ ರೂ. ಅನುದಾನ ಮೀಸಲಿಟ್ಟು ಕಾಮಗಾರಿ ಪ್ರಾರಂಭಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ವಿಶ್ವಗುರು ಬಸವಣ್ಣ ಅಥವಾ ಅನುಭವ ಮಂಟಪದ ಹೆಸರೆ ಪ್ರಸ್ತಾಪ ಮಾಡಿಲ್ಲ.

ಕಾರಂಜಾ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳ ಆಧುನಿಕರಣ ಹಾಗೂ ಮಾಂಜ್ರಾ ನದಿಯ ಯೋಜನೆಗಳೂ ಘೋಷಣೆಯಾಗಿವೆ. ಆದರೆ, ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರದ ವತಿಯಿಂದ ಕೈಗಾರಿಕೋದ್ಯಮ ಇಲಾಖೆಯ ಮೂಲಕ ವಿಶೇಷ ಪ್ರೋತ್ಸಾಹ ಧನ ಕಲ್ಪಿಸಿ ರೆಡಿಮೇಡ್‌ ಗಾರ್ಮೆಂಟ್ ಸ್ಥಾಪನೆ ಮಾಡಿ, ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿತ್ತು. ಅದಕ್ಕೂ ಕೂಡ ಸರ್ಕಾರ ಸ್ಪಂದಿಸಿಲ್ಲ.

ಜಿಲ್ಲೆಯಲ್ಲಿ ಯುನಾನಿ ವೈದ್ಯಕೀಯ ಕಾಲೇಜು, ಕಾನೂನು ಪದವಿ ಕಾಲೇಜು, ಕೃಷಿ ಪದವಿ ಕಾಲೇಜು ಸ್ಥಾಪಿಸುವ ಕುರಿತು ಬಜೆಟ್ ದಿನ ಘೋಷಣೆ ಮಾಡಬೇಕು. ಬಿಎಸ್‌ಸಿ ನರ್ಸಿಂಗ್‌ ಮಾದರಿಯಲ್ಲಿ ಬಿಎಸ್‌ಸಿ ನೇತ್ರ ಶಾಸ್ತ್ರ, ಬಿಎಸ್‌ಸಿ ಕಾರ್ಡಿಯಾಲಾಜಿ, ಹಾಗೂ ಬಿಎ ಪ್ರವಾಸೋದ್ಯಮ ಕೋರ್ಸ್‌ಗಳಿಗೆ ಸರ್ಕಾರ ಅನುಮತಿ ನೀಡಿ ಘೋಷಣೆ ಮಾಡಬೇಕು. ಅಲ್ಲದೆ, ಬೆಂಗಳೂರಿನ ಇಂದಿರಾಗಾಂಧಿ ಶಿಶು ಆಸ್ಪತ್ರೆ ವಿಭಾಗದ ಮಾದರಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು. ಬೀದರ್‌ ನಗರದ ಪಾಪನಾಶ ಕೆರೆಯನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡುವ ಕುರಿತು ಘೋಷಣೆ ಮಾಡಬೇಕು. ನಗರ ವ್ಯಾಪ್ತಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 5 ಕೋಟಿ ಅನುದಾನ ಮಂಜೂರು ಮಾಡಬೇಕು. 2018-19ನೇ ಸಾಲಿನಲ್ಲಿ ಘೋಷಣೆಯಾದ ಪ್ರಕಾರ ಚುಳಕಿ ನಾಲಾ ಯೋಜನೆಯ ಕಾಲುವೆಗಳ ಆಧುನಿಕರಣ ಕಾಮಗಾರಿ ಪ್ರಾರಂಭಿಸಬೇಕು. ಬೀದರ್‌ ನಗರದಲ್ಲಿ (ಎಟಿಎಸ್‌) ಅಡ್ವಾನ್ಸ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್ ಪ್ರಾಂಭಿಸುವ ನಿಟ್ಟಿನಲ್ಲಿ ಘೋಷಣೆ ಮಾಡಬೇಕು. ಕಾರಂಜಾ ಡ್ಯಾಂ ಪ್ರದೇಶದಲ್ಲಿ ಬೃಂದಾವನ ಗಾರ್ಡನ್‌ ಮಾದರಿ ಉದ್ಯಾನವನ, ಜಲಕ್ರೀಡೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಾಯಿಸಿದ್ದರೂ ಕೂಡ ಮುಖ್ಯಮಂತ್ರಿಗಳು ಇವುಗಳ ಕುರಿತು ಬಜೆಟ್ ಭಾಷಣದಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ.

ರಾಜ್ಯ ಆಯವ್ಯಯಕ್ಕೆ ಗಣ್ಯರ ಪ್ರತಿಕ್ರಿಯೆ
ರಾಜ್ಯ ಸರ್ಕಾರದ ಬಜೆಟ್ ಪೂರ್ಣ ಪ್ರಮಾಣದಲ್ಲಿ ತೃಪ್ತಿ ತಂದಿಲ್ಲ. ಆದರೂ ರೈತರ ಬಗ್ಗೆ ಕೆಲವು ಯೋಜನೆಗಳನ್ನು ಘೋಷಣೆ ಮಾಡಿದ್ದು ಸಂತೋಷ ತಂದಿದೆ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಅಡಿಯಲ್ಲಿ ವಿಮಾ ಕಂಪನಿಗಳಿಗೆ ಲಾಭ ಆಗುತ್ತಿದೆ. ರೈತರಿಗೆ ಅದರ ಲಾಭ ದೊರೆಯದಿರುವ ಕುರಿತು ರೈತರು ಸರ್ಕಾರದ ಮೇಲೆ ಒತ್ತಡ ಹೆರಿದ ಪರಿಣಾಮ ಮುಖ್ಯಮಂತ್ರಿಗಳು ರೈತರ ಬೇಡಿಕೆ ಅನುಸಾರ ಹೊಸ ಬೆಳೆ ವಿಮೆ ಯೋಜನೆ ಜಾರಿಗೆ ಮುಂದಾಗಿರುವುದು ಉತ್ತಮ ನಡೆಯಾಗಿದೆ. ಸರ್ಕಾರ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ವಿಶೇಷ ಅನುದಾನ ನೀಡುವ ಭರವಸೆ ಇತ್ತು. ಅಲ್ಲದೆ, ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಘೊಷಣೆ ಮಾಡಿಲ್ಲ.
•ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ರೈತ ಸಂಘ ಅಧ್ಯಕ್ಷ

ರಾಜ್ಯ ಬಜೆಟ್ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಿದೆ. ಕುರ್ಚಿ ಕಿತ್ತಾಟದಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಯುವಕರ ಕಡೆಗಣಿಸಲಾಗಿದೆ. ಉಚಿತ ಬಸ್‌ ಪಾಸ್‌, ಲ್ಯಾಪ್‌ಟಾಪ್‌ ವಿತರಣೆ ಭರವಸೆಗಳನ್ನು ಈಡೇರಿಸಿಲ್ಲ. ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಘೋಷಣೆ ಮಾಡಿಲ್ಲ. ಉದ್ಯೋಗಕ್ಕಾಗಿ ಬೇರೆ ನಗರಗಳ ಕಡೆಗೆ ಮುಖ ಮಾಡುವಂತಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ನೀಡಿಲ್ಲ.
•ರೇವಣಸಿದ್ದ ಜಾಡರ, ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿದೆ. ಆಶಾ ಕಾರ್ಯಕರ್ತೆರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ. ಗೌರವ ಧನ ಹೆಚ್ಚಿಸಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಸರ್ಕಾರ ಯುವ ಅಭಿವೃದ್ಧಿ ನಿಗಮ ರಚಿಸಬೇಕಿತ್ತು. ನಿರುದ್ಯೋಗ ಭತ್ಯೆ ಘೊಷಣೆ ಮಾಡಬೇಕಿತ್ತು. ರಾಜ್ಯದಲ್ಲಿನ ಜೀತದಾಳುಗಳನ್ನು ಪತ್ತೆಹಚ್ಚಿ ಬಿಡುಗಡೆಮಾಡು ಪುನರ್ವಸತಿ ಕಲ್ಪಿಸುವ ಘೊಷಣೆ ಮಾಡಬೇಕಿತ್ತು.
•ಮಹೇಶ ಗೋರನಾಳಕರ್‌, ಮಾನವ ಬಂಧುತ್ವ ವೇದಿಕೆ ಸಂಚಾಲಕ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇವಲ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡಿದ್ದಾರೆ. ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಕೃಷಿ ಯಂತ್ರೋಪಕರಣ ಉತ್ಪಾದನಾ ಘಟಕ ಸ್ಥಾಪನೆಯ ಕಾರ್ಯಗಳು ಇಂದಿಗೂ ಆರಂಭಗೊಂಡಿಲ್ಲ. ಇದೀಗ ಮತ್ತೆ ಹೊಸ ಯೋಜನೆಗಳನ್ನು ಘೊಷಣೆ ಮಾಡಿದ್ದು, ಅನುಷ್ಠಾಗೊಳ್ಳುವುದು ಕಷ್ಟ ಎಂಬಂತೆ ಆಗಿದೆ.
•ಗುರುನಾಥ ರಾಜಗೀರಾ

ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ, ಸರ್ಕಾರಕ್ಕೆ ತನ್ನದೆ ಎಷ್ಟೋ ಯೋಜನೆಗಳನ್ನು ನಡೆಸಲು ದುಡ್ಡು ಇಲ್ಲದೆ ಒದ್ದಾಡುತ್ತಿದೆ. ಅಂತಹದರಲ್ಲಿ ಇವತ್ತು ಮಾಡಿರುವ ಘೋಷಣೆಗಳಿಗೆ ಹೇಗೆ ದುಡ್ಡು ಹೊಂದಿಸುತ್ತಾರೆ? ಸುಮಾರು 13 ಜಿಲ್ಲೆಗಳು ಬರದಿಂದ ತತ್ತರಿಸಿದ್ದರೂ, ವಿಶೇಷ ಪರಿಹಾರ ಪ್ಯಾಕೇಜ್‌ ಘೋಷಿಸಲು ನಿರಾಸಕ್ತಿ ತೋರಿಸಲಾಗಿದೆ. ದಲಿತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳು ಇಲ್ಲ. ಸರ್ಕಾರ ಎಷ್ಟೂ ದಿನ ಆಡಳಿತ ಮಾಡುತ್ತದೆ ಗೊತ್ತಿಲ್ಲ. ಆದರೆ ಜನರನ್ನು ದಾರಿ ತಪ್ಪಿಸುವ ಬಜೆಟ್ ಮಂಡಿಸಿದೆ.
•ಭಗವಂತ ಖೂಬಾ, ಸಂಸದರು

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಎಲ್ಲಾ ವರ್ಗದ ಜನರಿಗೆ ಸ್ಪಂದಿಸಿ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಯಾವ ಜಿಲ್ಲೆಗೆ ಏನು ಸಿಗಬೇಕು ಎಂಬುದು ತಿಳಿದುಕೊಂಡು ಸೂಕ್ತವಾಗಿ ಯೋಜನೆಗಳನ್ನು ನೀಡಿದ್ದಾರೆ. ಸಹಕಾರ ಕ್ಷೇತ್ರದಿಂದ ಕೂಡ ರಾಜ್ಯದ ಜನರಿಗೆ ಉತ್ತಮ ಕೊಡುಗೆ ನೀಡಲಾಗಿದೆ. ಹಾಲಿನ ಪ್ರೋತ್ಸಾಹ ಧನ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಲಾಗಿದೆ. ಬೀದರ್‌ ಜಿಲ್ಲೆಗೂ ಕೂಡ ಉತ್ತಮ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅನುಭವ ಮಂಟಪಕ್ಕೂ ಅನುದಾನ ನೀಡಬೇಕಿತ್ತು. ಈ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಚಿವರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು.
•ಬಂಡೆಪ್ಪ ಖಾಶೆಂಪೂರ, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೈತರಿಗೆ ಬಂಪರ್‌ ಕೊಡುಗೆ ನೀಡಿದ್ದಾರೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ ರೂ. 10 ಸಾವಿರ ಹಾಗೂ ಭತ್ತ ಬೆಳೆಯುವ ರೈತರಿಗೆ ರೂ. 7,500 ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಕೃಷಿ ಭಾಗ್ಯ, ರೈತ ಸಿರಿ, ಕೃಷಿ ಹೊಂಡಗಳ ಸ್ಥಾಪನೆ, ಏತ ನೀರಾವರಿ, ಸಾವಯವ, ನೈಸರ್ಗಿಕ ಕೃಷಿ ಸೇರಿದಂತೆ ಕೃಷಿಗೆ ಸಂಬಂಧಿಸಿದ ಯೋಜನೆಗಳಿಗೆ ಒಟ್ಟು ರೂ. 46,850 ಕೋಟಿ ರೂ. ಮೀಸಲಿಡಲಾಗಿದೆ. ಬಜೆಟ್‌ನಲ್ಲಿ ಬೀದರ ಜಿಲ್ಲೆಗೆ ಹಲವು ಯೋಜನೆಗಳನ್ನನು ನೀಡಿದ್ದು, ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ 300 ಕೋಟಿ, ಬಸವಕಲ್ಯಾಣ ಹಾಗೂ ಭಾಲ್ಕಿ ರೈತರ ಜಮೀನುಗಳ ನೀರಾವರಿಗೆ ರೂ.75 ಕೋಟಿ ಅನುದಾನ ನೀಡಿರುವುದು ಹರ್ಷ ತಂದಿದೆ.
•ದತ್ತಾತ್ರಿ ಮೂಲಗೆ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಪರ ಬಜೆಟ್ ಮಂಡನೆ ಮಾಡಿದ್ದಾರೆ. ರೈತಪರ, ಕಾರ್ಮಿಕರ ಪರ ಒಟ್ಟಾರೆ ರಾಜ್ಯದ ಅಭಿವೃದ್ಧಿ ಬಜೆಟ್‌ನಲ್ಲಿ ಅಡಗಿದೆ. ಅಲ್ಲದೆ, ಗಡಿ ಜಿಲ್ಲೆಗೂ ಕೊಡುಗೆ ನೀಡಿದ್ದಾರೆ. ಬಜೆಟ್ ಮುನ್ನ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಕೆಲವು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ ಇನ್ನೂ ಕೆಲವು ಯೋಜನೆಗಳು ಬಜೆಟ್‌ನಲ್ಲಿ ನಿರೀಕ್ಷಿಸಿದ್ದೆವು. ಆದರೆ, ಮುಂದಿನ ದಿನಗಳಲ್ಲಿ ಇನ್ನುಳಿದ ಯೋಜನೆಗಳು ಅನುಷ್ಠಾನಗೊಳ್ಳುವ ಭರವಸೆ ಇದೆ.
•ಅರವಿಂದಕುಮಾರ ಅರಳಿ, ಎಂಎಲ್‌ಸಿ

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್ ಉತ್ತಮವಾಗಿದೆ. ಗಡಿ ಜಿಲ್ಲೆಯ ಬೀದರನ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಉತ್ತಮವಾಗಿದೆ. 300 ಕೋಟಿ ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಪದೆಪದೆ ಬರಗಾಲಕ್ಕೆ ಒಳಗಾಗುತ್ತಿರುವ ಜಿಲ್ಲೆಗೆ ಮುಕ್ತಿ ಸಿಗುವ ಸಾಧ್ಯತೆಗಳು ಇವೆ. ವಿಮಾನಯಾನ ಆರಂಭಕ್ಕೂ ಅನುದಾನ ನೀಡಿದ್ದು, ಜಿಲ್ಲೆಯ ಜನರು ಕೂಡ ವಿಮಾನದಲ್ಲಿ ಪ್ರವಾಸ ಮಾಡುವ ದಿನಗಳು ಬರಲಿವೆ.
•ವಿಜಯಸಿಂಗ್‌, ಎಂಎಲ್‌ಸಿ, ಬೀದರ

ಮರಾಠ ಸಮಾಜದ ಜನರನ್ನು ಬಜೆಟ್‌ನಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬಣ್ಣ ಹಚ್ಚುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಮರಾಠ ಸಮಾಜದಿಂದ ಏಕ್‌ ಮರಾಠ ಲಾಖ್‌ ಮರಾಠ ಎಂಬ ಹೋರಾಟ ನಡೆಸಿ ಮರಾಠ ಸಮುದಾಯಕ್ಕೆ ವಿಶೇಷ ಮಾನ್ಯತೆ ನೀಡುವಂತೆ ಒತ್ತಾಯಿಸಲಾಗಿತ್ತು. ಶಾಹು ಮಹಾರಾಜ್‌ ನಿಗಮ ಮಂಡಳಿ ಸ್ಥಾಪನೆ ಮಾಡಿ ಅನುದಾನ ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಸ್ಪಂದಿಸಿಲ್ಲ.
•ಸಂತೋಷ ಶೆಡೋಳೆ, ಮರಾಠ ಸಮಾಜದ ಯುವ ಮುಖಂಡ

ಜನ ವಿರೋಧಿ, ರೈತ ವಿರೋಧಿ, ಯುವಕರ ವಿರೋಧಿ ಬಜೆಟ್ ಮಂಡನೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದಾಗ ನೀಡಿದ ಭರವಸೆ ಈಡೇರಿಸಿಲ್ಲ. ಕಾರಂಜಾ ಸಂತ್ರಸ್ತರು ಅಹೋರಾತ್ರಿ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದರೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಮೈತ್ರಿ ಸರ್ಕಾರದ ಶಾಸಕರು, ಸಚಿವರು ಸಲ್ಲಿಸಿದ ಮನವಿಗೂ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲ.
•ಡಾ| ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷರು

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next