Advertisement

ಲಿಂಗಾಯತ ಒಪ್ಪದ ಸ್ವಾ ಮೀಜಿಗಳು ಪೀಠ ಬಿಡಲಿ

11:15 AM Aug 11, 2017 | Team Udayavani |

ಬೆಂಗಳೂರು: ಬಸವಣ್ಣನೇ ಲಿಂಗಾಯತ ಧರ್ಮದ ಸಂಸ್ಥಾಪಕ, ವಚನಗಳೇ ಧರ್ಮಗ್ರಂಥ’ ಇದನ್ನು ಮಠಾಧೀಶರೂ ಸೇರಿದಂತೆ ಲಿಂಗಾಯತ ಸಮುದಾಯ ದವರೆಲ್ಲರೂ ಒಪ್ಪಬೇಕು, ಸಹಮತ ವ್ಯಕ್ತಪಡಿಸದ ಸ್ವಾಮೀಜಿಗಳು ಪೀಠ ತ್ಯಾಗ ಮಾಡಬೇಕು ಎನ್ನುವ ಖಡಕ್‌
ನಿರ್ಧಾರಕ್ಕೆ ಬಂದಿರುವ ಲಿಂಗಾಯತ ಸಮುದಾಯದ ಪ್ರಮುಖರು ವೀರಶೈವ ಹೊರತುಪಡಿಸಿ ಲಿಂಗಾಯತ ಸಮುದಾಯದ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಡುವ ನಿರ್ಣಯ ಕೈಗೊಂಡಿದ್ದಾರೆ.

Advertisement

ಗುರುವಾರ ನಡೆದ ಮಠಾಧೀಶರ, ರಾಜಕಾರಣಿಗಳ, ಸಮಾಜದ ಪ್ರಮುಖರ ಸಭೆಯಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು. ಸಭೆಯ ನಿರ್ಣಯಗಳನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಂಡಿಸಿದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ಎ. ಬಿ. ಮಾಲಕರೆಡ್ಡಿ, ಎಸ್‌.ಎಸ್‌. ಪಾಟೀಲ ಅನುಮೋದನೆ ನೀಡಿದರು. 

ಪ್ರಮುಖ ನಿರ್ಣಯಗಳು
1)ಬಸವಣ್ಣ ಮತ್ತು ಬಸವಾದಿ ಶರಣರು ಸ್ಥಾಪಿಸಿದ ಐತಿಹಾಸಿಕ ಲಿಂಗಾಯತ ಧರ್ಮ, ಸಿದ್ದಾಂತ ಮತ್ತು ವಚನಗಳನ್ನು ವೀರಶೈವದ ಹೆಸರಿನಲ್ಲಿ ಬಳಸಿಕೊಳ್ಳಬಾರದು.

2)ಬಸವಾದಿ ಶರಣರ ತತ್ವಗಳ ಪ್ರಚಾರ ಮತ್ತು ಪ್ರಚಾರಕ್ಕಾಗಿ ಸ್ಥಾಪಿಸಲಾದ ವಿರಕ್ತ ಮಠಗಳಲ್ಲಿನ ಮಠಾಧೀಶರು, ಲಿಂಗಾಯತ ಹೆಸರು ಮತ್ತು ತತ್ವ ಸಿದ್ಧಾಂತವನ್ನು  ಯುದ್ಧೋಪಾದಿಯಲ್ಲಿ ತಿಳಿಸಬೇಕು. ಬಸವ ತತ್ವ ಪ್ರಚಾರ ಮಾಡದಿದ್ದರೆ, ಅಂತವರು ಪೀಠ ಬಿಡಬೇಕು.

3)ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುವುದು.

Advertisement

4)ಲಿಂಗಾಯತವನ್ನು ವಿಶ್ವಗುರು ಬಸವಣ್ಣ 12 ನೇ ಶತಮಾನದಲ್ಲಿಯೇ ಸ್ಥಾಪಿಸಿದರೆಂದು ಮತ್ತು ವಚನಗಳೇ ಧರ್ಮಗ್ರಂಥಗಳೆಂದು ಒಪ್ಪುವುದು.

5)ಅಖೀಲ ಭಾರತ ವೀರಶೈವ ಮಹಾಸಭೆಯು 1941 ರಲ್ಲಿ ದಾವಣಗೆರೆಯಲ್ಲಿ ನಡೆಸಿದ ಅಧಿವೇಶನದಲ್ಲಿ ‘ಅಖೀಲ ಭಾರತ ಲಿಂಗಾಯತ ಮಹಾಸಭೆ’ ಎಂದು ಹೆಸರು ಬದಲಾಯಿಸಲು ನಿರ್ಧರಿಸಿತ್ತು. ಮತ್ತು ಲಿಂಗಾಯತ ಸ್ವತಂತ್ರ ಧರ್ಮವೆಂದು ಘೋಷಣೆ ಮಾಡಿತ್ತು. ಅದು ನನೆಗುದಿಗೆ ಬಿದ್ದಿರುವುದರಿಂದ ಈಗ “ಅಖೀಲ ಭಾರತ ವೀರಶೈವ ಮಹಾಸಭೆ’ಗೆ ಅಖೀಲ ಭಾರತ ಲಿಂಗಾಯತ ಮಹಾಸಭೆ’ ಎಂದು ನಾಮಕರಣ ಮಾಡಲು ಒತ್ತಾಯಿಸುವುದು. 

ಮೂರೂ ಮನವಿ ಪರಿಶೀಲಿಸಿ ಕ್ರಮ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಮಠಾಧೀಶರು ಮತ್ತು ಪ್ರಮುಖ ರಾಜಕೀಯ ನಾಯಕರು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಕುರಿತು ಮೂರು ಪ್ರತ್ಯೇಕ ಮನವಿಗಳು ಬಂದಿವೆ. ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆಗೆ ಮನವಿ ಬಂದಿದೆ. ನಂತರ ಮಾತೆ ಮಹಾದೇವಿ ವೀರಶೈವ ಹೊರತುಪಡಿಸಿ ಲಿಂಗಾಯತ ಧರ್ಮಕ್ಕೆ ಮಾತ್ರ ಪ್ರತ್ಯೇಕ ಸ್ಥಾನ ಮಾನ ನೀಡಬೇಕೆಂದು ಮನವಿ
ಮಾಡಿದ್ದಾರೆ. ಲಿಂಗಾಯತ ಸಮಾಜದ ಪ್ರಮುಖರು, ಮಠಾಧೀಶರು, ಸಚಿವರು ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಲು ಶಿಫಾರಸು ಮಾಡುವಂತೆ ಈಗ ಮತ್ತೂಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಮೂರೂ ಮನವಿಗಳ ಕುರಿತು ಕಾನೂನಾತ್ಮಕವಾಗಿ, ಧಾರ್ಮಿಕವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಿರಿಗೆರೆ ಸ್ವಾಮೀಜಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂದಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮೀಜಿ ಬೇರೆ ಕಾರ್ಯಕ್ರಮವಿದ್ದ ಕಾರಣ ಬಂದಿಲ್ಲ. ಅವರೆಲ್ಲ ನಮ್ಮೊಂದಿಗಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next