Advertisement

30 ಕ್ವಿಂಟಾಲ್‌ ಭತ್ತದ ಬೀಜ ದಾಸ್ತಾನು

10:31 PM May 22, 2019 | mahesh |

ಪುತ್ತೂರು: ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರು ಪ್ರಸ್ತುತ ಮುಂಗಾರು ಆರಂಭದ ನಿರೀಕ್ಷೆಯಲ್ಲಿದ್ದು, ಒಮ್ಮೆ ಮಳೆಗಾಲ ಆರಂಭಗೊಂಡರೆ ಕೃಷಿ ಚಟುವಟಿಕೆಗಳುಕೂಡ ಗರಿಗೆದರುತ್ತವೆ. ಕರಾವಳಿ ಭಾಗದ ಪ್ರಮುಖ ಆಹಾರ ಬೆಳೆ ಎನಿಸಿಕೊಂಡಿರುವ ಭತ್ತದ ಬೇಸಾಯ ಆರಂಭಕ್ಕೂ ಬೆಳೆಗಾರರು ಭತ್ತದ ಬೀಜವನ್ನು ಸಿದ್ಧಗೊಂಡಿದ್ದು, ಮಳೆ ಬಿದ್ದ ತತ್‌ಕ್ಷಣ ನಾಟಿ ಕಾರ್ಯ ಆರಂಭವಾಗುತ್ತದೆ.

Advertisement

ಪುತ್ತೂರು ತಾಲೂಕಿನ ಕೃಷಿ ಇಲಾ ಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸುಮಾರು 30 ಕ್ವಿಂಟಾಲ್‌ನಷ್ಟು ಭತ್ತದ ಬೀಜ ದಾಸ್ತಾನಿದ್ದು, ಸಬ್ಸಿಡಿ ದರದಲ್ಲಿ ಭತ್ತ ಬೆಳೆಗಾರರಿಗೆ ಬೀಜ ಪೂರೈಕೆಯಾಗಿದೆ. ಮುಂಗಾರು ಆರಂಭದಲ್ಲಿ ಸಾಮಾನ್ಯವಾಗಿ ಇಷ್ಟೇ ಬೀಜವನ್ನು ದಾಸ್ತಾನು ಇರಿಸಲಾಗುತ್ತಿದೆ. ಮುಂದೆ ಸ್ವಲ್ಪ ಬೇಡಿಕೆ ಕಂಡುಬರಲಿದ್ದು, ಆಗ ಅಗತ್ಯದಷ್ಟು ಬೀಜವನ್ನು ತರಿಸಲಾಗುತ್ತದೆ.

ಎಂಒ 4 (ಭದ್ರಾ) ದಾಸ್ತಾನು
ಪುತ್ತೂರು ತಾಲೂಕಿನಲ್ಲಿ ಹೋಬಳಿ ಗೊಂದರಂತೆ ಪುತ್ತೂರು, ಉಪ್ಪಿನಂಗಡಿ ಹಾಗೂ ಕಡಬಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ತಲಾ 10 ಕ್ವಿಂಟಾಲ್‌ನಂತೆ ಒಟ್ಟು 30 ಕ್ವಿಂಟಾಲ್‌ ಎಂಒ4 (ಭದ್ರಾ) ಭತ್ತದ ತಳಿಯ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಅಂದರೆ ಪುತ್ತೂರು ತಾಲೂಕಿನಲ್ಲಿ 900 ಹೆಕ್ಟೇರ್‌ ಮುಂಗಾರಿನ ಭತ್ತ ಹಾಗೂ 500 ಹೆಕ್ಟೇರ್‌ ಹಿಂಗಾರಿನ ಭತ್ತ ಬೆಳೆಯುವ ಪ್ರದೇಶ ಇದ್ದು, ಬಹುತೇಕ ಬೆಳೆಗಾರರು ಎಂಒ4 (ಭದ್ರಾ) ತಳಿಯನ್ನೇ ಉಪಯೋಗಿಸುತ್ತಾರೆ. ಇದು ಬಿಟ್ಟರೆ ಜ್ಯೋತಿ ಹಾಗೂ ಜಯ ತಳಿಗೆ ಕೊಂಚ ಬೇಡಿಕೆ ಇದ್ದು, ಪ್ರಸ್ತುತ ಈ ತಳಿಗಳ ಬೀಜಗಳು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನಿಲ್ಲ. ಮುಂದೆ ಬೇಡಿಕೆ ಇದ್ದರೆ ಈ ತಳಿಗಳ ಬೀಜಗಳನ್ನೂ ತರಿಸಿಕೊಳ್ಳಲಾಗುತ್ತದೆ. ಭತ್ತದ ಬೀಜಗಳನ್ನು ಬೆಟ್ಟರೆ ಬೇರೆ ಯಾವುದೇ ಬೆಳೆಗಳ ಬೀಜಗಳು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಾಗುತ್ತಿಲ್ಲ ಎಂದು ಕೇಂದ್ರದ ಸಿಬಂದಿ ಹೇಳುತ್ತಾರೆ.

ರೈತರೇ ಸಂಗ್ರಹಿಸುತ್ತಾರೆ
ತಾಲೂಕಿನಲ್ಲಿ ಭತ್ತದ ಬೀಜಗಳನ್ನು ಸಾಮಾನ್ಯವಾಗಿ ರೈತರೇ ತಮಗೆ ಬೇಕಾದ ತಳಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಜತೆಗೆ ಕೆಲವರು ಇತರ ಬೆಳೆಗಾರರ ಜತೆ ಮಾತುಕತೆ ಮಾಡಿಕೊಂಡು ತಮಗೂ ಭತ್ತದ ಬೀಜವನ್ನು ಪಡೆಯುತ್ತಾರೆ. ಹೀಗಿರುವಾಗ ರೈತ ಸಂಪರ್ಕ ಕೇಂದ್ರದ ಬೀಜಕ್ಕೆ ಬೇಡಿಕೆ ಕಡಿಮೆ ಇರುತ್ತದೆ. ಆದರೆ ಕೆಲವೊಂದು ಸಂದರ್ಭ ಮೂರ್‍ನಾಲ್ಕು ವರ್ಷಗಳಿಗೊಮ್ಮೆ ಭತ್ತದ ಬೀಜಗಳನ್ನು ಬದಲಿಸುವ ಸಂದರ್ಭ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುತ್ತಾರೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಸಹಾಯಧನದ ಅವಕಾಶ
ಭತ್ತ ಬೆಳೆಯಲು ಬೇರೆ ರೀತಿಯ ತೊಂದರೆಗಳಿದ್ದರೆ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿದರೆ ಅವರ ನೇತೃತ್ವದಲ್ಲೇ ಉಳುಮೆ, ನಾಟಿ, ಭತ್ತ ಕೊಯಿಲಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಯಂತ್ರದ ಮೂಲಕ ಉಳುಮೆ ಮಾಡುವವರಿಗೆ ಹೆಕ್ಟೇರ್‌ಗೆ 4000 ರೂ. ಸಹಾಯಧನ ಪಡೆಯುವ ಅವಕಾಶವೂ ಇರುತ್ತದೆ. ಪುತ್ತೂರು ಕೃಷಿ ಇಲಾಖೆ ವ್ಯಾಪ್ತಿಯ ಉಪ್ಪಿನಂಗಡಿ ಹಾಗೂ ಕಡಬದಲ್ಲಿ ಬಾಡಿಗೆ ಆಧಾರಿತ ಯಂತ್ರಗಳ ಪೂರೈಕೆ ಕೇಂದ್ರವೂ ಕಾರ್ಯಾಚರಿಸುತ್ತಿದೆ.

Advertisement

ಮುಂಗಾರು ಪ್ರಾರಂಭದ ಬಳಿಕ ಬೇಡಿಕೆ
ಪ್ರಸ್ತುತ ತಾಲೂಕಿನಲ್ಲಿ 30 ಕಿಂಟ್ವಾಲ್‌ ಭತ್ತದ ಬೀಜವನ್ನು ತಾಲೂಕಿನ 3 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇರಿಸಲಾಗಿದ್ದು, ಮುಂಗಾರು ಆರಂಭವಾದ ಬಳಿಕ ಬೀಜಕ್ಕೆ ಬೇಡಿಕೆಯೂ ಆರಂಭವಾಗುತ್ತದೆ. ಬಹುತೇಕ ಭತ್ತದ ಬೆಳೆಗಾರರು ಅವರೇ ಬೀಜವನ್ನು ತಯಾರಿಸಿ ಹಂಚಿಕೊಳ್ಳುವುದರಿಂದ ಇಲಾಖೆಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ.
– ನಯೀಮ್‌ ಹುಸೇನ್‌ ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next