Advertisement

ಸಾರಿಗೆ ನೌಕರರ ಪ್ರತಿಭಟನೆ: 30 ಮಂದಿ ಪ್ರೊಬೇಷನರಿ ಸಿಬ್ಬಂದಿ ವಜಾ

07:22 PM Apr 21, 2021 | Team Udayavani |

ಹಾವೇರಿ: 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎರಡು ವಾರ ಪೂರೈಸಿದೆ. ಈ ನಡುವೆ ಮಂಗಳವಾರ 146 ಬಸ್‌ಗಳ ಸಂಚಾರ ನಡೆದಿದ್ದು, ಸಾರಿಗೆ ಸಂಸ್ಥೆ 30 ಪ್ರೊಬೇಷನರಿ ಸಿಬ್ಬಂದಿಯನ್ನು ವಜಾಗೊಳಿಸಿದೆ.

Advertisement

14 ದಿನಗಳಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮುಷ್ಕರ ಮುಂದುವರಿದಿರುವುದರ ನಡುವೆಯೂ ಮಂಗಳವಾರ ಶೇ.45ರಷ್ಟು, ಅಂದರೆ 146 ಬಸ್‌ಗಳು ರಸ್ತೆಗಿಳಿದಿದ್ದವು. 300ಕ್ಕೂ ಅಧಿ ಕ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಇದು ಪ್ರಯಾಣಿಕರು ಅಲ್ಪ ನಿಟ್ಟುಸಿರು ಬಿಡುವ ಬೆಳವಣಿಗೆಯಾಗಿದೆ. ಹಾವೇರಿಯಿಂದ 24, ಹಿರೇಕೆರೂರು 40, ರಾಣೆಬೆನ್ನೂರು 36, ಹಾನಗಲ್ಲ 13, ಬ್ಯಾಡಗಿ 23, ಸವಣೂರು ಡಿಪೋದಿಂದ 10 ಬಸ್‌ಗಳು ಸಂಚರಿಸಿದವು.  ತಾಲೂಕು ಕೇಂದ್ರ, ಪ್ರಮುಖ ಸ್ಥಳಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳು ಓಡಾಟ ಆರಂಭಿಸಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಯಿತು.

30 ಸಿಬ್ಬಂದಿ ವಜಾ: ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ನೌಕರರ ಮೇಲೆ ಮುಷ್ಕರ ಆರಂಭಿಸಿದಾಗಿನಿಂದಲೂ ಶಿಸ್ತು ಕ್ರಮ ಕೈಗೊಳ್ಳುತ್ತಿರುವ ಸಂಸ್ಥೆ ಮಂಗಳವಾರ 30 ಪ್ರೊಬೇಷನರಿ ಸಿಬ್ಬಂದಿಯನ್ನು ವಜಾಗೊಳಿಸಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಎರಡು ದಿನಗಳ ಹಿಂದೆಯೇ 239 ಪ್ರೊಬೇಷನರಿ ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಇಷ್ಟಾಗಿಯೂ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮಂಗಳವಾರ 30 ಜನರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಪ್ರಕ್ರಿಯೆ ಮುಂದುವರಿಯಲಿದ್ದು, ಇನ್ನಷ್ಟು ಸಿಬ್ಬಂದಿ ಕೆಲಸ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಅರ್ಧದಷ್ಟು ಸಾರಿಗೆ ಸಂಸ್ಥೆ ಬಸ್‌ ಗಳ ಓಡಾಟ ಆರಂಭವಾಗಿದ್ದರೂ ಇನ್ನೂ ಗ್ರಾಮೀಣ ಭಾಗಗಳಿಗೆ ಬಸ್‌ ಸಂಚಾರ ಶುರುವಾಗಿಲ್ಲ. ಆದ್ದರಿಂದ, ಟೆಂಪೋ, ಟ್ರಾÂಕ್ಸ್‌, ಟಂಟಂ ಮುಂತಾದ ಖಾಸಗಿ ವಾಹನಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿದವು. ಬಸ್‌ ನಿಲ್ದಾಣಗಳಲ್ಲಿ ಈಗ ಸಾರಿಗೆ ಸಂಸ್ಥೆ ಬಸ್‌ ಗಳೊಂದಿಗೆ ಖಾಸಗಿ ವಾಹನಗಳ ಸಾಲೂ ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next