ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಶನಿವಾರ ಕೋವಿಡ್-19 ಸೋಂಕಿತರ ಸಂಖ್ಯೆ ಸ್ಪೋಟಗೊಂಡಿದೆ. ಕಾಪು ಪೊಲೀಸ್ ಠಾಣೆಯ ಎಎಸ್ಐ ಸೇರಿದಂತೆ 30ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ.
ಕಾಪು ಪೊಲೀಸ್ ಠಾಣೆಯ 56 ವರ್ಷ ಪ್ರಾಯದ ಎಎಸ್ಐ ಗೆ ಸೋಂಕು ದೃಢಪಟ್ಟಿದ್ದು, ಅವರು ಈಗಾಗಲೇ ಕೋಟದ ತನ್ನ ಮನೆಯಲ್ಲೇ ಹೋಂ ಕ್ವಾರಂಟೈನ್ ನಲ್ಲಿ ಇರುವುದರಿಂದ ಇತರ ಪೊಲೀಸರ ಭೀತಿ ಕಡಿಮೆಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕಾಪು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದ್ದು, ಅಗತ್ಯದ ದಾಖಲೆಗಳ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸೀಲ್ ಡೌನ್ ನಡೆಸಲಾಗುವುದು ಎಂದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಉದಯವಾಣಿಗೆ ತಿಳಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಎಎಸ್ಐ ಒಬ್ಬರಿಗೆ ಕೋವಿಡ್-19 ಸೋಂಕು ಧೃಢಪಟ್ಟಿರುವುದರಿಂದ ಠಾಣೆಯನ್ನು ಪುರಸಭೆ ಸಹಯೋಗದೊಂದಿಗೆ ಸಂಪೂರ್ಣ ಸ್ಯಾನಿಟೈಸೇಷನ್ ಮಾಡಲಾಗುವುದು. ಮೂರು ದಿನಗಳ ಕಾಲ ಠಾಣೆ ಸೀಲ್ ಡೌನ್ ಆಗಲಿದ್ದು, ಪಕ್ಕದ ವೀರಭದ್ರ ಸಭಾಭವನದಲ್ಲಿ ಠಾಣೆ ಕಾರ್ಯನಿರ್ವಹಿಸಲಿದೆ ಎಂದು ಕಾಪು ಎಸ್ಸೈ ರಾಜಶೇಖರ ಬಿ. ಸಾಗನೂರು ತಿಳಿಸಿದ್ದಾರೆ.
ಪಡುಬಿದ್ರಿ, ಕುತ್ಯಾರು, ಕುರ್ಕಾಲು, ಚಂದ್ರನಗರ, ಶಿರ್ವ, ಹೆಜಮಾಡಿ ಸಹಿತ ಕೆಲವು ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಸ್ಥಳೀಯರಲ್ಲೇ ಕಂಡು ಬಂದಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ಪಾಸಿಟಿವ್ ಪ್ರಕರಣಗಳ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸೇಷನ್ ಮೊದಲಾದ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.