Advertisement

ಕೋವಿಡ್ 19 ಸೋಂಕು: ನೌಕರರಿಗೆ 30 ಲ. ರೂ. ವಿಮೆ

04:02 AM Aug 08, 2020 | Hari Prasad |

ಬೆಂಗಳೂರು: ಕೋವಿಡ್ 19 ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಸೋಂಕು ತಗಲಿ ಮೃತಪಟ್ಟ ಸರಕಾರಿ ಅಧಿಕಾರಿ ಮತ್ತು ಸಿಬಂದಿ ಕುಟುಂಬಕ್ಕೆ 30 ಲಕ್ಷ ರೂ. ವಿಮಾ ಪರಿಹಾರ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಈವರೆಗೆ ಕೋವಿಡ್ 19 ಸೇನಾನಿಗಳು ಎಂದು ಉಲ್ಲೇಖಗೊಂಡವರಿಗೆ ಮಾತ್ರ ಈ ಸೌಲಭ್ಯವಿತ್ತು.

ಇನ್ನು ಮುಂದೆ ಕೋವಿಡ್ 19 ನಿಯಂತ್ರಣದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬಂದಿಯ ಕುಟುಂಬಕ್ಕೆ ಇದು ಅನ್ವಯವಾಗಲಿದೆ.

ಕೋವಿಡ್ 19 ನಿಯಂತ್ರಣದಲ್ಲಿ ಭಾಗಿಯಾದ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳು ಸೋಂಕಿಗೆ ಸಿಲುಕಿದರೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ.

ಡಾ| ಯತೀಂದ್ರ ಅವರಿಗೆ ಸೋಂಕು
ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ, ಶಾಸಕ ಡಾ| ಯತೀಂದ್ರ ಅವರಿಗೂ ಕೋವಿಡ್ 19 ಸೋಂಕು ತಗಲಿದೆ. ತನ್ನ ಸಂಪರ್ಕದಲ್ಲಿದ್ದವರು ಕ್ವಾರಂಟೈನ್‌ಗೆ ಒಳಗಾಗುವಂತೆ  ಅವರು ಟ್ವಿಟರ್‌ನಲ್ಲಿ  ಮನವಿ ಮಾಡಿಕೊಂಡಿದ್ದಾರೆ.

Advertisement

3 ಸಾವಿರ ತಲುಪಿದ ಸಾವಿನ ಸಂಖ್ಯೆ
ರಾಜ್ಯದಲ್ಲಿ ಶುಕ್ರವಾರ 101 ಮಂದಿ  ಸೋಂಕಿತರು  ಮೃತಪಟ್ಟಿದ್ದು, ಆ ಮೂಲಕ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ 3,000 ಗಡಿಗೆ ಬಂದು ನಿಂತಿದೆ.

ಜತೆಗೆ ಹೊಸದಾಗಿ 6,670 ಮಂದಿಗೆ ಸೋಂಕು ತಗುಲಿದ್ದು, 3,951 ಮಂದಿ ಗುಣಮುಖರಾಗಿದ್ದಾರೆ.  ಈಗ ಒಟ್ಟಾರೆ ಸೋಂಕು ಪ್ರಕರಣಗಳು 1,64,924ಕ್ಕೆ, ಮೃತರ ಸಂಖ್ಯೆ 2998ಕ್ಕೆ ಹಾಗೂ ಗುಣಮುಖರಾದವರ ಸಂಖ್ಯೆ 84,232ಕ್ಕೇರಿದೆ. ಸದ್ಯ 77,686 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ  678 ಮಂದಿ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ನಿತ್ಯ ಸರಾಸರಿ 94 ಮಂದಿ ಮೃತಪಟ್ಟಿದ್ದು, ರಾಜ್ಯದ ಮರಣ ದರ ಶೇ. 1.81ರಷ್ಟಿದೆ. ಸೋಂಕಿತರ ಸಾವಿನಲ್ಲಿ ದೇಶದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. ಶುಕ್ರವಾರ 23 ಸಾವಿರ ರ್ಯಾಪಿಡ್‌ ಆ್ಯಂಟಿಜೆನ್‌, 20 ಸಾವಿರ ಆರ್‌ಟಿಪಿಸಿಆರ್‌ ಸೇರಿ ಒಟ್ಟು 43,553 ಸೋಂಕು ಪರೀಕ್ಷೆಗಳು ನಡೆದಿದ್ದು, 6,670 ಪಾಸಿಟಿವ್‌ ವರದಿಯಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು, ಅಂದರೆ 2,147 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಬಳ್ಳಾರಿ 684, ಬೆಳಗಾವಿ 390, ಕಲಬುರಗಿ, ಉಡುಪಿ, ಧಾರವಾಡ ಹಾಗೂ ಮೈಸೂರು ನಾಲ್ಕು ಜಿಲ್ಲೆಗಳಲ್ಲಿ ತಲಾ 200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಇನ್ನು ಬೆಂಗಳೂರಿನಲ್ಲಿ 1,131, ಬಳ್ಳಾರಿ 627, ಕಲಬುರಗಿ 203 ಸಹಿತ ಒಟ್ಟು 3,951 ಮಂದಿ ಗುಣಮುಖರಾಗಿದ್ದಾರೆ.

ಮೂರು ಲಕ್ಷ ಗಡಿ ದಾಟಿದ ರ್ಯಾಪಿಡ್‌ ಪರೀಕ್ಷೆ
ತ್ವರಿತವಾಗಿ ಸೋಂಕು ಪತ್ತೆಗೆ ರಾಜ್ಯದಲ್ಲಿ ಜುಲೈ 20ರಿಂದ ರ್ಯಾಪಿಡ್‌ ಆ್ಯಂಟಿ ಜೆನ್‌ ಪರೀಕ್ಷೆ ಆರಂಭಿಸಲಾಗಿದ್ದು, ಮೂರು ವಾರಗಳಲ್ಲಿ ಒಟ್ಟು 3,13,737 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಎಂದಿನಂತೆ ಆರ್‌ಟಿಪಿಸಿಆರ್‌ ಪರೀಕ್ಷೆಗಳು ನಡೆಯುತ್ತಿದ್ದು, ಸದ್ಯ ಒಟ್ಟಾರೆ ಪರೀಕ್ಷೆಗಳ ಸಂಖ್ಯೆ 16.2 ಲಕ್ಷಕ್ಕೆ ತಲುಪಿವೆ.

Advertisement

Udayavani is now on Telegram. Click here to join our channel and stay updated with the latest news.

Next