ಬೆಂಗಳೂರು: ವಿದೇಶದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ಫ್ಲ್ಯಾಟ್, ನಿವೇಶನ ಖರೀದಿಸುವ ಅನಿವಾಸಿ ಭಾರತೀಯರೆ ಎಚ್ಚರ! ದೂರದ ಅಮೆರಿಕದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ 30 ಲಕ್ಷ ರೂ. ಕೊಟ್ಟು ವಂಚನೆಗೊಳಗಾಗಿರುವ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಎಕ್ಸ್ ಮೂಲಕ ವಂಚಿಸಿದ ಜೆ.ಪಿ.ನಗರದ ವರ್ಚ್ಯೂ ಇನ್‌ಫ್ರಾ ಬಿಲ್ಡರ್ಸ್ ವಿರುದ್ಧ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು ಮೂಲದ ರಾಘವೇಂದ್ರ ಪ್ರಸಾದ್ ವಂಚನೆಗೊಳಗಾದವರು. ಸದ್ಯ ರಾಘವೇಂದ್ರ ಪ್ರಸಾದ್ ಅಮೆರಿಕದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೇಸ್‌ಬುಕ್ ಪೇಜ್‌ನಲ್ಲಿ ಬಂದ ಜಾಹೀರಾತು ಕಂಡು ಬಿಲ್ಡರ್ಸ್‌ಗೆ ಕರೆ ಮಾಡಿ ಕೆಂಗೇರಿಯ ರಾಯಲ್ ನಿಸರ್ಗ ಲೇಔಟ್‌ನಲ್ಲಿ ನಿವೇಶನ ನೋಡಲು ರಾಘವೇಂದ್ರ ಪ್ರಸಾದ್ ಪತ್ನಿ ಉಜ್ವಲಾರನ್ನು ಕಳುಹಿಸಿದ್ದರು. ನಿವೇಶನ ಚೆನ್ನಾಗಿದ್ದರಿಂದ ಸ್ಥಳದಲ್ಲೇ 50 ಸಾವಿರ ರೂ. ಮುಂಗಡ ಹಣ ನೀಡಿ ಕಾಯ್ದಿ ರಿಸಲಾಗಿತ್ತು. ಆ ನಂತರ ಹಂತ- ಹಂತವಾಗಿ ಬಿಲ್ಡರ್ಸ್ ಸೂಚಿಸಿದ ಖಾತೆಗೆ 30 ಲಕ್ಷ ರೂ. ವರ್ಗಾಯಿಸಿದ್ದರು. ಆದರೆ, ಕಂಪನಿ ಸೈಟ್ ರಿಜಿಸ್ಟ್ರಾರ್ ಮಾಡಿಸದೆ ಆರೇಳು ತಿಂಗಳು ಅಲೆದಾಡಿಸಿತ್ತು. ಆ ಬಳಿಕ ಪ್ರಶ್ನಿಸಿದಾಗ ತಾವೂ ಕಾಯ್ದಿರಿಸಿದ್ದ ನಿವೇಶನ ಬೇರೆಯವರಿಗೆ ಮಾರಿದ್ದಾರೆ ಎಂಬುದು ತಿಳಿಯಿತು.
ಹೀಗಾಗಿ ಬೇರೆ ನಿವೇಶನ ಕಂಡು ಅದನ್ನು ಕೊಡುವಂತೆ ಬಿಲ್ಡರ್ಸ್‌ಗೆ ಕೇಳಿಕೊಂಡೆ. ಆದರೆ, ನಿವೇಶನ ವೀಕ್ಷಿಸಲು ಹೋದಾಗ, ಅದು ಕೂಡ ಬೇರೆಯವರಿಗೆ ಮಾರಿದ್ದರು. ಹೀಗಾಗಿ ಹಣ ವಾಪಸ್ ಕೊಡುವಂತೆ ಮನವಿ ಮಾಡಿಕೊಂಡೆ. ಆದರೆ, ಕಂಪನಿ ಮಾಲೀಕರಾದ ಅರವಿಂದ್, ಹರಿಕೃಷ್ಣ ದಿನಕ್ಕೊಂದು ಸಬೂಬು ಹೇಳಿಕೊಂಡು 7-8 ತಿಂಗಳು ಹಣ ಕೊಡದೆ ಅಲೆದಾಡಿಸಿದ್ದಾರೆ ಎಂದು ರಾಘವೇಂದ್ರ ಪ್ರಸಾದ್ ಎಕ್ಸ್‌ನಲ್ಲಿ ದೂರಿದ್ದಾರೆ.
ಹೀಗಾಗಿ ನಿವೇಶನ ಕೊಡುವುದಾಗಿ ವಂಚಿಸಿದ ವರ್ಚ್ಯೂ ಇನ್‌ಫ್ರಾ ಬಿಲ್ಡರ್ಸ್ ಕಂಪನಿಯ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ನಗರ ಪೊಲೀಸ್ ಆಯಕ್ತರಿಗೆ ಟ್ಯಾಗ್ ಮಾಡಿ, ನನಗೆ ನ್ಯಾಯ ಕೊಡಿಸಿ ಎಂದು ಕೋರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ.