Advertisement

ಲಸಿಕೆ ಪಡೆಯಲು 30 ಕಿ.ಮೀ. ದೂರ ಸಾಗಬೇಕಾದ ಅನಿವಾರ್ಯತೆ

09:35 PM May 27, 2021 | Team Udayavani |

ಕೋಟ: ಕೋವಿಡ್ ಲಸಿಕೆ ಜನರಿಗೆ ತಲುಪಿಸುವ ಸಲುವಾಗಿ ಸರಕಾರ ಸಾಕಷ್ಟು ಯೋಜನೆ ರೂಪಿಸಿದೆ ಹಾಗೂ ಜನರು ವ್ಯಾಕ್ಸಿನ್‌ ಪಡೆಯಲು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.  ಆದರೆ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ವ್ಯಾಪ್ತಿಯ ಕೋಡಿಕನ್ಯಾಣ  ನಿವಾಸಿಗಳು ಕೋವಿಡ್‌ ವ್ಯಾಕ್ಸಿನ್‌ ಪಡೆಯುವಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ  30 ಕಿ.ಮೀ. ದೂರದಲ್ಲಿರುವುದು.

Advertisement

ಆರಂಭದಲ್ಲಿ ಕೋಡಿ ಕನ್ಯಾಣದಿಂದ ಎರಡು ವ್ಯಾಕ್ಸಿನ್‌ ಕ್ಯಾಂಪ್‌ಗ್ಳನ್ನು ನಡೆಸಲಾಗಿತ್ತು ಹಾಗೂ ಇದರಲ್ಲಿ 198 ಮಂದಿ ಲಸಿಕೆ ಪಡೆದಿದ್ದರು. ಅನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದವರು ಕೋಡಿಕನ್ಯಾಣ ಪ್ರದೇಶದ ಮೂರೇ-ಮೂರು ಮಂದಿ ಮಾತ್ರ ಎನ್ನುವುದು ಗ್ರಾ.ಪಂ. ನೀಡುವ ಅಂಕಿ ಅಂಶವಾಗಿದೆ.

ಕ್ಯಾಂಪ್‌ಗೆ ನಕಾರ :

ಪ್ರಾಥಮಿಕ ಆರೋಗ್ಯ ಕೇಂದ್ರ ದೂರವಾಗುವುದರಿಂದ  ಕೋಡಿಕನ್ಯಾಣದಲ್ಲೇ ಕ್ಯಾಂಪ್‌ ನಡೆಸಬೇಕೆಂದು ಗ್ರಾ.ಪಂ. ವತಿಯಿಂದ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಸಿಬಂದಿ ಕೊರತೆ, ಮೂಲಸೌಕರ್ಯದ ಕೊರತೆ ಮುಂತಾದ  ಕಾರಣವನ್ನು ಮುಂದಿಟ್ಟುಕೊಂಡು  ಕ್ಯಾಂಪ್‌ ನಡೆಸಲು ನಿರಾಕರಿಸಲಾಗಿದೆ.

ಅಸಮರ್ಪಕ ಹಂಚಿಕೆ :

Advertisement

ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದುವರೆಗೆ 1,377 ಲಸಿಕೆ ಖಾಲಿಯಾಗಿದೆ. ಇದರಲ್ಲಿ 920 ಡೋಸ್‌ ಕೋಡಿಬೆಂಗ್ರೆಗೆ, 201 ಕೋಡಿ ಕನ್ಯಾಣಕ್ಕೆ ಮತ್ತು 86 ಡೋಸ್‌ಗಳು ವ್ಯಾಪ್ತಿಯಿಂದ ಹೊರಪ್ರದೇಶಕ್ಕೆ ನೀಡಿದ್ದು 170 ಡೋಸ್‌ ಹಿಂದಿರುಗಿಸಲಾಗಿದೆ.

ಒಟ್ಟು ಜನಸಂಖ್ಯೆ 7,230 :

ಕೋಡಿ ಗ್ರಾ.ಪಂ.ಎನ್ನುವುದು ಕೋಡಿ ಕನ್ಯಾಣ ಮತ್ತು ದ್ವೀಪ ಪ್ರದೇಶ ಕೋಡಿ ಬೆಂಗ್ರೆಯನ್ನು ಒಳಗೊಂಡಿದೆ. ಗ್ರಾ.ಪಂ. ವ್ಯಾಪ್ತಿಯ ಒಟ್ಟು ಜನಸಂಖ್ಯೆ ಸುಮಾರು 7,230. ಇದರಲ್ಲಿ   4,500ಮಂದಿ  ಕೋಡಿಕನ್ಯಾಣದಲ್ಲಿ, ಮಿಕ್ಕುಳಿದ 2,730 ಮಂದಿ ಕೋಡಿಬೆಂಗ್ರೆಯಲ್ಲಿ ವಾಸವಿದ್ದಾರೆ. ಆದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವಿರುವುದು ಅಳಿವೆಯಾಚೆಗಿನ ದ್ವೀಪ ಪ್ರದೇಶ ಕೋಡಿಬೆಂಗ್ರೆಯಲ್ಲಿ. ಹೀಗಾಗಿ ಕೋಡಿಕನ್ಯಾಣ ನಿವಾಸಿಗಳು ವಾಹನದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಬೇಕಾದರೆ ಸಾಸ್ತಾನ, ಬ್ರಹ್ಮಾವರ, ಕಲ್ಯಾಣಪುರ, ಕೆಮ್ಮಣ್ಣು  ಮೂಲಕ 30 ಕಿ.ಮೀ. ಸುತ್ತಿ ಬಳಸಿ ಪ್ರಯಾಣಿಸಬೇಕು ಅಥವಾ ಕೋಡಿಬೆಂಗ್ರೆ-ಹಂಗಾರಕಟ್ಟೆ ನಡುವಿನ ಬಾರ್ಜ್‌ ನಲ್ಲಿ ತಲುಪಬೇಕು. ಆದರೆ ಇದೀಗ ಬಾರ್ಜ್‌ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ 30 ಕಿಮೀ. ಸಂಚಾರ ಅನಿವಾರ್ಯ.

ಸಮಸ್ಯೆ ಬಗ್ಗೆ  ಸೂಕ್ತ ಮಾಹಿತಿ ಪಡೆದು, ವೈದ್ಯಾಧಿಕಾರಿಗಳ ಜತೆ ಚರ್ಚಿಸಿ ವ್ಯಾಕ್ಸಿನ್‌ ಕ್ಯಾಂಪ್‌ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಡಾ| ಸುಧೀರ್‌ಚಂದ್ರ ಸೂಡ,ಡಿ.ಎಚ್‌.ಒ. ಉಡುಪಿ

 

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next