ಇಂಫಾಲ: ರಾಜ್ಯದಲ್ಲಿ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ನಾಗರಿಕರ ವಿರುದ್ಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಕ್ಕಾಗಿ ಕನಿಷ್ಠ 40ಮಂದಿ ಬಂಡುಕೋರರು ವಿವಿಧ ಪ್ರದೇಶಗಳಲ್ಲಿ ಹತರಾಗಿದ್ದಾರೆ, ಹಲವರನ್ನು ಬಂಧಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಎನ್ ಬಿರೇನ್ ಸಿಂಗ್ ಅವರ ಹೇಳಿಕೆಯು ಮಣಿಪುರ ಸರ್ಕಾರವು ಮೇ 31 ರವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮತ್ತಷ್ಟು ವಿಸ್ತರಿಸಿದ ನಂತರ ಬಂದಿದೆ. ಮೇ 3 ರಂದು ಆದಿವಾಸಿಗಳು ಮತ್ತು ಬುಡಕಟ್ಟು ಅಲ್ಲದವರ ನಡುವಿನ ಘರ್ಷಣೆಯ ನಂತರ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು.
ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಿದ ಬಳಿಕ ಈ ಘರ್ಷಣೆ ಆರಂಭವಾಗಿದೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪ್ರತಿಭಟನಾಕಾರರು ವಿರೋಧಿಸಿದ್ದರು. ಘರ್ಷಣೆ ಪೀಡಿತ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರ ಮೂರು ದಿನಗಳ ಪ್ರಸ್ತಾವಿತ ಭೇಟಿಗೆ ಮುಂಚಿತವಾಗಿ ಭಾನುವಾರ (ಮೇ 28) ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಇಂಫಾಲ್‌ಗೆ ಆಗಮಿಸಿದ್ದಾರೆ.
ಮಣಿಪುರದಲ್ಲಿ ಘರ್ಷಣೆ ನಡೆದು ಸುಮಾರು ಒಂದು ತಿಂಗಳಾದರೂ ರಾಜ್ಯದಲ್ಲಿ ಅಶಾಂತಿ ಇನ್ನೂ ಮುಂದುವರೆದಿದೆ. ಗುರುವಾರ ಮುಂಜಾನೆ, ಮಣಿಪುರದ ಬಿಷ್ಣುಪುರದಲ್ಲಿ ಭುಗಿಲೆದ್ದ ಹೊಸ ಹಿಂಸಾಚಾರದಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು.