ನವದೆಹಲಿ: ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಪ್ರಸಿದ್ಧಿಯಾಗಿದ್ದ ಮೈಸೂರಿನ ಶಿಲ್ಪಿ ಯೋಗಿರಾಜ್ ಅವರಿಗೆ, ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ನಿರ್ಮಾಣದ ಹೊಣೆ ನೀಡುವ ಸಾಧ್ಯತೆಗಳಿವೆ.
ಒಟ್ಟು 30 ಅಡಿ ಎತ್ತರದ ಪ್ರತಿಮೆ ಇದಾಗಲಿದ್ದು, ಗ್ರಾಂಡ್ ಕ್ಯಾನೋಪಿ ಕೆಳಗೆ ಮತ್ತು ಈ ಹಿಂದೆ ಇದ್ದ ಅಮರ ಜವಾನ್ ಜ್ಯೋತಿ ಹತ್ತಿರದಲ್ಲಿ ಇದನ್ನು ಇಡಲಾಗುವುದು.
ಯೋಗಿರಾಜ್ ಅವರು ಕೇದಾರನಾಥದಲ್ಲಿ ಆದಿಶಂಕರಾಚಾರ್ಯ ಪ್ರತಿಮೆಯನ್ನು ನಿರ್ಮಿಸಿದ್ದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದರು. ಹಾಗೆಯೇ, ಇಂಡಿಯಾ ಗೇಟ್‌ನಲ್ಲಿ ಬೋಸ್ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರತಿಮೆಯನ್ನು ಅನಾವರಣ ಮಾಡುವುದಾಗಿ ಘೋಷಿಸಿದ್ದರು.
ತೆಲಂಗಾಣದಿಂದ ಕಪ್ಪು ಗ್ರಾನೈಟ್ ಶಿಳೆಯನ್ನು ದೆಹಲಿಗೆ ತರಲಾಗಿದ್ದು, ಸದ್ಯವೇ ಕೆತ್ತನೆ ಕೆಲಸ ಶುರುವಾಗಲಿದೆ. ಈ ಪ್ರತಿಮೆಯ ವಿನ್ಯಾಸವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ರೂರಿಸಿದೆ.
ಕೇಂದ್ರ ಸಂಸ್ಕೃತಿ ಇಲಾಖೆ ಪ್ರಕಾರ, ಬುಧವಾರ ಯೋಗಿರಾಜ್ ಅವರು ದೆಹಲಿಗೆ ಆಗಮಿಸಲಿದ್ದಾರೆ. ಆಗಸ್ಟ್ 15ರ ಒಳಗೆ ಈ ಪ್ರತಿಮೆಯ ನಿರ್ಮಾಣ ಕೆಲಸ ಮುಗಿಯಲಿದೆ. ಈ ಹಿಂದೆಯೇ ಪ್ರಧಾನಿ ಮೋದಿ ಅವರು, ಯೋಗಿರಾಜ್ ಅವರು ನೀಡಿದ್ದ ವಿನ್ಯಾಸಕ್ಕೆ ಒಪ್ಪಿಗೆ ನೀಡಿದ್ದರು.