Advertisement

ರಾಜ್ಯದಲ್ಲಿ 30 ಸಾವಿರ ಕೋಟಿ ರೂ.ಹೂಡಿಕೆಗೆ ಪ್ರಸ್ತಾವನೆ: ಸಚಿವ ಶೆಟ್ಟರ

03:44 PM Aug 18, 2020 | Suhan S |

ಹುಬ್ಬಳ್ಳಿ: ರಾಜ್ಯದಲ್ಲಿ ಮೂವತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಉದ್ದಿಮೆದಾರರಿಂದ ಪ್ರಸ್ತಾವನೆಗಳು ಬಂದಿದ್ದು, ಇದರಿಂದ ಸುಮಾರು 45 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈಗಾಗಲೇ ಕೆಲ ಉದ್ದಿಮೆಗಳಿಗೆ ಅನುಮತಿ ನೀಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಸೋಮವಾರ ಇಲ್ಲಿನ ಡೆನಿಸನ್ಸ್‌ ಹೊಟೇಲ್‌ ನಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಒಂದೇ ಕಡೆ ಕೈಗಾರಿಕೆಗಳು ಕ್ರೋಢಿಕರಣವಾಗಬಾರದು ಎನ್ನುವ ಕಾರಣಕ್ಕೆ ಆದಷ್ಟು ಉತ್ತರ  ಕರ್ನಾಟಕ ಭಾಗಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಯಾದಗಿರಿ ಜಿಲ್ಲೆಗೆ ಕೆಲ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಇತ್ತೀಚೆಗೆ ನಗರದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದರು.

ಬೆಂಗಳೂರಿನ 5-6 ಕೈಗಾರಿಕೆ ಪ್ರದೇಶಗಳನ್ನು ಟೌನ್‌ಶಿಪ್‌ಗೆ ಚಿಂತನೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಪ್ರಾಯೋಗಿಕವಾಗಿ ಈ ಭಾಗದ ತಾರಿಹಾಳ ಕೈಗಾರಿಕಾ ಪ್ರದೇಶವನ್ನು ಟೌನ್‌ಶಿಪ್‌ ಗೆ ಪರಿಗಣಿಸಲಾಗುವುದು. ಧಾರವಾಡದ ಮುಮ್ಮಿಘಟ್ಟಿ ಕೈಗಾರಿಕಾ ಪ್ರದೇಶವನ್ನು ಎಫ್‌ ಎಂಸಿಜಿ ಕ್ಷೇತ್ರಕ್ಕೆ ಮೀಸಲಿಡಲಾಗಿದ್ದು, ಈ ನಿಟ್ಟಿನಲ್ಲಿ ಕೆಲ ಕಂಪನಿಗಳೊಂದಿಗೆ ಚರ್ಚೆ ನಡೆದಿದ್ದು, ಇದೊಂದು ಎಫ್‌ಎಂಸಿಜಿ ಕ್ಷೇತ್ರದಲ್ಲಿ ದೊಡ್ಡ ಕೈಗಾರಿಕೆ ಘಟಕವಾಗಲಿದೆ ಎಂದರು.

ನಿವೇಶನ ಪಡೆದು ಕೈಗಾರಿಕೆಗಳನ್ನು ಆರಂಭಿಸದಿರುವುದು ಸರಿಯಲ್ಲ. ಹೀಗಾಗಿ ದಂಡ ವಸೂಲಿ ಮಾಡುವ ಪ್ರಕ್ರಿಯೆ ಕೈಬಿಡಲು ಸಾಧ್ಯವಿಲ್ಲ. ದಂಡದ ಪ್ರಮಾಣದಲ್ಲಿ ಹೆಚ್ಚಳವಿದ್ದರೆ ಅದನ್ನು ಪರಿಶೀಲಿಸಿ ಕೈಗಾರಿಕೆಗಳಆರಂಭಕ್ಕೆ ತೊಂದರೆಯಾಗದಂತೆ ನಿಗದಿ ಮಾಡಲಾಗುವುದು. ಕೆಎಸ್‌ಎಸ್‌ಐಡಿಸಿ ಮತ್ತು ಕೆಐಎಡಿಬಿಯಲ್ಲಿ ನಿವೇಶನ ಹಂಚಿಕೆ ಹಾಗೂ ನಂತರದ ಪ್ರಕ್ರಿಯೆ, ನಿವೇಶನ ದರ ಸೇರಿದಂತೆ ಇತರೆ ನಿಯಮಗಳಲ್ಲಿ ಏಕರೂಪ ತರಲಾಗುವುದು ಎಂದರು.

ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ ಸಿಇಒ ಡಾ| ಎನ್‌.ಶಿವಶಿಂಕರ ಮಾತನಾಡಿ, ಉದ್ದಿಮೆದಾರರಿಗೆ ನಿವೇಶನ ಹಂಚಿಕೆ ಮಾಡಿದ 2 ವರ್ಷದೊಳಗೆ ತಾತ್ಕಾಲಿಕ ದರದ ಶೇ.20 ಮೀರದಂತೆ ಅಂತಿಮ ದರ ಪ್ರಕಟ ಮಾಡಿ ಆ ಹಣವನ್ನು ಉದ್ದಿಮೆದಾರರಿಂದ ಪಡೆದು ಖರೀದಿ ಪತ್ರ ಸೇರಿದಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು. ಒಂದು ವೇಳೆ ಶೇ.20ಕ್ಕಿಂತ ಹೆಚ್ಚಾದರೆ ಸರಕಾರವೇ ಭರಿಸಲಿದೆ. ಈ ನಿಯಮ ಹೊಸ ಕೈಗಾರಿಕಾ ಪ್ರದೇಶಗಳಿಗೆ ಮಾತ್ರ ಅನ್ವಯಿಸಲಿದೆ ಎಂದರು.

Advertisement

ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ ಶಿರೂರ ಮಾತನಾಡಿ, ಸರಕಾರದ ಮಾರ್ಗಸೂಚಿ ಪ್ರಕಾರ ನಿವೇಶನ ಹಂಚಿಕೆಯಾದ ಎರಡು ವರ್ಷದ ನಂತರ ದರ ಪರಿಷ್ಕರಣೆಯಾಗುತ್ತದೆ. ನಂತರದಲ್ಲಿ ಪ್ರತಿ ವರ್ಷವೂ ಹೆಚ್ಚಾಗಲಿದೆ. ನಿವೇಶನ ಹಂಚಿಕೆಯಾದ 5 ವರ್ಷದಲ್ಲಿ ಕೈಗಾರಿಕೆ ಸ್ಥಾಪಿಸಬೇಕೆನ್ನುವ ನಿಯಮ ಉಲ್ಲಂಘನೆ ಹಾಗೂ ದರ ಪರಿಷ್ಕರಣೆಯಿದೆ. ಗಾಮನಗಟ್ಟಿಯಲ್ಲಿ ನಿವೇಶನ ಪಡೆದವರಿಗೆ ಹಿಂದಿನ ದರದಲ್ಲಿ ನೀಡಲು ಸಾಧ್ಯವಿಲ್ಲ.

ಕೈಗಾರಿಕೆಗಳಿಗೆ ಹಾಗೂ ಸಂಸ್ಥೆಗೆ ನಷ್ಟವಾಗದ ರೀತಿಯಲ್ಲಿ ಚರ್ಚಿಸಿ ದರ ನಿಗದಿ ಮಾಡಲಾಗುವುದು. ಈ ಬಾರಿ ದರ ಪರಿಷ್ಕರಣೆ ಹಾಗೂ ದಂಡ ಹೆಚ್ಚಳವಾಗಬಾರದೆಂದು ನಿರ್ಧರಿಸಿ ಶೇ.25 ದಂಡ ವಿಧಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಶೇ.15 ಹಾಗೂ ಖರೀದಿ ಪತ್ರ ಮಾಡಿಕೊಳ್ಳುವಾಗ ಉಳಿದ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕೆಎಸ್‌ಎಸ್‌ಐಡಿಸಿ ಅಧ್ಯಕ್ಷ ಕಳಕಪ್ಪ ಬಂಡಿ ಮಾತನಾಡಿ, ರಾಜ್ಯದಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂಬುದು ಸರಕಾರದ ಉದ್ದೇಶ. ಕೆಲ ನಿಯಮಗಳನ್ನು ಸಡಿಲಿಕೆ ಮಾಡಿ ಉದ್ದಿಮೆದಾರರ ಹಿತ ಕಾಪಾಡಲಾಗುವುದು. ಯಾರಿಗೂ ಅನ್ಯಾಯವಾಗದಂತೆ ದಂಡ-ನಿವೇಶನ ದರ ನಿಗದಿ ಮಾಡಲಾಗುವುದು ಎಂದರು. ಗ್ರೇಟರ್‌ ಹು-ಧಾ ಇಂಡಸ್ಟ್ರೀಸ್  ಅಸೋಸಿಯೇಶನ್‌ ಅಧ್ಯಕ್ಷ ಆರ್‌. ಜೆ.ಭಟ್ಟ, ವಿಶ್ವನಾಥಗೌಡರ, ಬೇಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ತಿಟ್ಟೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಅವರು ಕೈಗಾರಿಕೆ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳ ಕುರಿತು ಪ್ರಸ್ತಾಪಿಸಿದರು.

ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next