ಯಾದಗಿರಿ: ಅಂತಾರಾಜ್ಯದಿಂದ ಆಗಮಿಸುವ ಜಿಲ್ಲೆಯ ಕಾರ್ಮಿಕರಿಗೆ ಸರ್ಕಾರಿ ವಸತಿ ನಿಲಯ ಇತರೆ ಸ್ಥಳಗಳಲ್ಲಿ 14ದಿನ ಕ್ವಾರಂಟೈನ್ ನಲ್ಲಿಡುವುದು ಅಗತ್ಯವಾಗಿದ್ದು, ಜಿಲ್ಲಾಡಳಿತ ಕೇಳಿದರೆ ತಮ್ಮ ಮನೆಯನ್ನಾದರೂ ಕೊಡಲು ಸಿದ್ಧ ಎಂದು ಸುರಪುರ ಶಾಸಕ ನರಸಿಂಹ ನಾಯಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ಕೆಲವು ಸಂಸ್ಥೆಯವರು ಅಪಸ್ವರ ಎತ್ತುತ್ತಿರುವುದು ಇದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿ ಹೇಳಲಾಗಿದೆ ಎಂದರು.
ಜಿಲ್ಲೆಯ ಕಾರ್ಮಿಕರು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಸಿಲುಕಿರುವುದು ಅವರನ್ನು ಕರೆತರಲು ರಾಜ್ಯ ಸರ್ಕಾರ ಮುಂದಾಗಿದೆ. ಸುರಪುರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಜನರು ತೀವ್ರ ತೊಂದರೆಯಲ್ಲಿ ಸಿಲುಕಿರುವುದು ಅವರು ಪಡುತ್ತಿರುವ ಕಷ್ಟವನ್ನು ಹೇಳಿಕೊಂಡರೆ ನೋಡಲಾಗುತ್ತಿರಲಿಲ್ಲ. ಅನಿವಾರ್ಯವಾಗಿ ಏನು ಮಾಡಲಾಗದ ಸ್ಥಿತಿಯಿತ್ತು ಎಂದರು.
ಇದೀಗ ಬೆಳಗಾವಿಯ ಕಾಗವಾಡ ಚೆಕ್‌ಪೋಸ್ಟ್ ಬಳಿ 10 ಬಸ್, ಗೋವಾದ ಕುಣಕುಂಬಿ ಬಳಿ 10 ಸೇರಿ ಕರ್ನಾಟಕದ ಗಡಿಯಿಂದ ಕರೆತರಲು 30 ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಮೇ 12ರಿಂದ ಸಾರಿಗೆ ಬಸ್‌ಗಳು ಸಂಚರಿಸಲು ಸಿದ್ಧವಾಗಿದ್ದು, ಮೊದಲ ದಿನ ಒಂದು ಸಾವಿರ ಜನರು ಬರುವ ನಿರೀಕ್ಷೆಯಿದೆ. ಇನ್ನೂ ಹೆಚ್ಚಿನ ಜನರು ಬರುವವರಿದ್ದರೆ ವ್ಯವಸ್ಥೆ ಮಾಡಲಾಗುವುದು. ನಿರ್ದಿಷ್ಟವಾಗಿ ಎಷ್ಟು ಜನರಿದ್ದಾರೆ ಎನ್ನುವುದು ತಿಳಿದಿಲ್ಲ ಎಂದರು.
ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಹೊರ ರಾಜ್ಯದಿಂದ ಬಂದವರಿಗೆ ಮೊದಲು ಜ್ವರ ತಪಾಸಣೆಗೆ ಕೇಂದ್ರಗಳಿಗೆ ಕರೆದ್ಯೊಯ್ದು ತಪಾಸಣೆ ಬಳಿಕ 14 ದಿನ ಕ್ವಾರಂಟೈನ್‌ನಲ್ಲಿ ಅವಧಿ ಮುಕ್ತಾಯದ ಬಳಿಕವೇ ಗ್ರಾಮಗಳಿಗೆ ಕಳಿಸಲಾಗುವುದು ಎಂದರು.
ಗಡಿಯವರೆಗೆ ಸಂಚರಿಸುವಂತೆ ಅನುಮತಿ ನೀಡಲು ಡಿಸಿ ಆಯಾ ರಾಜ್ಯದ ಸಂಬಂಧಿಸಿದ ಡಿಸಿಗಳಿಗೆ ಪತ್ರ ಬರೆದು ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದಾರೆ. ಹಾಗಾಗಿ ಗಡಿಯಿಂದ ಕಾರ್ಮಿಕರನ್ನು ಕರೆತರಲಾಗುವುದು ಎಂದರು. ಮದ್ಯ ಮಾರಾಟ ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮದ್ಯ ನಿಷೇಧದಿಂದ ಆರ್ಥಿಕವಾಗಿ ಕೊಂಚ ತೊಂದರೆಯಾಗಬಹುದು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಕುಡಿಯುವವರು ಮದ್ಯ ಸೇವಿಸುವ ಚಟದಿಂದ ಮುಕ್ತರಾಗಿರುತ್ತಾರೆ. ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವುದು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟರು.