ಯಾದಗಿರಿ: ಜಿಲ್ಲೆಯ ಲೇಖಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೈ.ಕ ಪ್ರದೇಶಾಭಿವೃದ್ಧಿ ಮಂಡಳಿ ಮ್ಯಾಕ್ರೋ ಕ್ರಿಯಾ ಯೋಜನೆಯಡಿ 2017-18ನೇ ಸಾಲಿನಲ್ಲಿ 25 ಲಕ್ಷ ರೂ. ಮೌಲ್ಯದ 30 ಲೇಖಕರ ಪುಸ್ತಕ ಖರೀದಿಸಲು ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪುಸ್ತಕ ಆಯ್ಕೆ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಪ್ರತಿ ಪುಸ್ತಕದ 1,200 ಪ್ರತಿಗಳನ್ನು ಖರೀದಿಸಿ ಹೈ.ಕ ವಿಭಾಗದ 6 ಜಿಲ್ಲೆಗಳ ಎಲ್ಲ ಗ್ರಾಪಂ ಗ್ರಂಥಾಲಯಗಳಿಗೆ ಸರಬರಾಜು ಮಾಡಲಾಗುತ್ತದೆ.
ಮೊದಲನೇ ಪಟ್ಟಿಯಲ್ಲಿರುವ 30 ಲೇಖಕರ 30 ಶೀರ್ಷಿಕೆಗಳ 1,200 ಪ್ರತಿ ಖರೀದಿಗಾಗಿ 26,42,400 ರೂ. ಅನುದಾನ ಭರಿಸಬೇಕಾಗಿತ್ತು. ಆದರೆ, ಎಚ್‌ಕೆಆರ್‌ಡಿಬಿಯಿಂದ 25 ಲಕ್ಷ ರೂ. ಮಾತ್ರ ಅನುದಾನ ನೀಡಲಿದೆ. ಈ ಹಿನ್ನೆಲೆಯಲ್ಲಿ ದುಬಾರಿ ಬೆಲೆಯಿರುವ ಪುಸ್ತಕ ಪ್ರತಿಗಳನ್ನು ಕಡಿಮೆಗೊಳಿಸಿ, 25 ಲಕ್ಷ ರೂ. ಅನುದಾನಕ್ಕೆ ತಕ್ಕಂತೆ ಖರೀದಿಸಲು ತೀರ್ಮಾನಿಸಲಾಯಿತು. 2015-16ನೇ ಮೊದಲ ಬಾರಿಗೆ ಹೈ.ಕ ಭಾಗದ ಲೇಖಕರು ಬರೆದ 120 ಪುಸ್ತಕಗಳನ್ನು ಪ್ರತಿ ಗ್ರಾಪಂಗೆ ಒದಗಿಸಲು ಎಚ್‌ಕೆಆರ್‌ಡಿಬಿ ಖರೀದಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜೆ. ಮಂಜುನಾಥ, ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕ ಪುಸ್ತಕಗಳನ್ನು ಪೂರೈಸಬೇಕಿದೆ. ತಾವು ಈ ಹಿಂದೆ ಸುರಪುರ ಗ್ರಂಥಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲ ಆಗುವ ಪುಸ್ತಕ ಒದಗಿಸುವಂತೆ ಕೋರಿದ್ದರು. ಆ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ಪೂರೈಸಬೇಕು ಎಂದು ಅವರು
ಹೇಳಿದರು.
ಸಮಿತಿ ಉಪಾಧ್ಯಕ್ಷ ಜಿಪಂ ಸಿಇಒ ಡಾ| ಅವಿನಾಶ್ ಮೆನನ್ ರಾಜೇಂದ್ರನ್, ಸದಸ್ಯರಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ಗೌನಳ್ಳಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದೇಶ್ವರಪ್ಪ. ಜಿ.ಬಿ., ಸಮಿತಿ ಸದಸ್ಯ ಕಾರ್ಯದರ್ಶಿ ಎಂ.ಎಸ್. ರೆಬಿನಾಳ, ಕನ್ನಡ ಸಂಸ್ಕೃತಿ ಇಲಾಖೆ ಪ್ರತಿನಿಧಿ ಪ್ರಸಾದ, ಗ್ರಂಥಾಲಯ ಸಹಾಯಕ ಬಸವನಗೌಡ ಪಾಟೀಲ ಹಾಗೂ ಸಿಬ್ಬಂದಿ ಎಂ.ಎನ್. ಪಟೇಲ್ ಸಭೆಯಲ್ಲಿದ್ದರು.