Advertisement

ಅನರ್ಹ ಬಿಪಿಎಲ್‌ ಪಡಿತರದಾರರಿಂದ ವಸೂಲಾದ ದಂಡ 30.13 ಲಕ್ಷ ರೂ.

10:50 PM Jan 22, 2020 | Team Udayavani |

ಮಹಾನಗರ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ದ.ಕ. ಜಿಲ್ಲೆಯಲ್ಲಿನ ಅನರ್ಹ ಬಿಪಿಎಲ್‌ ಕಾರ್ಡ್‌ ದಾರರನ್ನು ಪತ್ತೆ ಹಚ್ಚಿ ನಾಲ್ಕು ತಿಂಗಳುಗಳಲ್ಲಿ ಸಂಗ್ರಹಿಸಿದ ಒಟ್ಟು 30,13,718 ರೂ. ದಂಡದ ಮೊತ್ತವನ್ನು ಸರಕಾರಕ್ಕೆ ಪಾವತಿಸಿದೆ. ಸದ್ಯ ದಂಡ ಸಂಗ್ರಹ ನಿಲ್ಲಿಸಲಾಗಿದ್ದರೂ, ಅಕ್ರಮ ಬಿಪಿಎಲ್‌ ಕಾರ್ಡ್‌ದಾರರ ಬೇಟೆ ಮುಂದುವರಿದಿದೆ.

Advertisement

ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ ತಿಂಗಳಿನಿಂದ ಅಕ್ರಮ ಬಿಪಿಎಲ್‌ ಪಡಿತರದಾರರ ಪತ್ತೆ ಕಾರ್ಯ ಆರಂಭವಾಗಿದೆ. ಅರ್ಹತೆ ಇಲ್ಲದಿದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಮುಲಾಜಿಲ್ಲದೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಡಿಸೆಂಬರ್‌ ತಿಂಗಳಾಂತ್ಯದವರೆಗೆ ನಡೆಸಲಾಗಿತ್ತು. ಇದರಿಂದ ಹಲವರು ತಾವಾಗಿಯೇ ಕಾರ್ಡ್‌ ಹಸ್ತಾಂತರಿಸಿದರೆ, ಬಹುತೇಕ ಮಂದಿಯನ್ನು ಇಲಾಖೆ ಅಧಿಕಾರಿಗಳೇ ಹುಡುಕಿ ದಂಡ ವಿಧಿಸಿದ್ದರು. ಅಕ್ರಮ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆ ಹಚ್ಚಲು ಆರ್‌ಟಿಒ ಸಹಾಯ ಪಡೆಯಲಾಗಿತ್ತು.

ಬೆಳ್ತಂಗಡಿಯಲ್ಲಿ ಹೆಚ್ಚು ದಂಡ ಸಂಗ್ರಹ
ಡಿಸೆಂಬರ್‌ ತಿಂಗಳಾಂತ್ಯದವರೆಗೆ ಒಟ್ಟು 30,13,718 ರೂ. ದಂಡ ಸಂಗ್ರಹಿಸಿ ಸದ್ಯ ಈ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ. ಆ ಮೂಲಕ ಬಡವರಿಗಾಗಿ ಇದ್ದ ಯೋಜನೆಯನ್ನು ಬಡವರಿಗೆ ನೀಡಲು ಹೆಚ್ಚಿನ ಅನುಕೂಲವಾದಂತಾಗಿದೆ. ಬೆಳ್ತಂಗಡಿಯಲ್ಲಿ 8,07,738 ರೂ. ದಂಡ ಸಂಗ್ರಹವಾಗುವ ಮೂಲಕ ಜಿಲ್ಲೆಯಲ್ಲೇ ಅತಿ ಹೆಚ್ಚು ದಂಡ ಇಲ್ಲಿ ಸಂಗ್ರಹವಾದಂತಾಗಿದೆ. ಉಳಿದಂತೆ ಮಂಗಳೂರು ಅನೌಪಚಾರಿಕ ಪಡಿತರ ಪ್ರದೇಶದಲ್ಲಿ 3,63,339 ರೂ., ಮಂಗ ಳೂರು ತಾಲೂಕಿನಲ್ಲಿ 5,14,323 ರೂ., ಬಂಟ್ವಾಳ    5,24,224 ರೂ., ಪುತ್ತೂರಿನಲ್ಲಿ 4,95,255 ರೂ., ಸುಳ್ಯದಲ್ಲಿ 3,08,839 ರೂ. ದಂಡವನ್ನು ಸಂಗ್ರಹಿಸಲಾಗಿದೆ.

ಸದ್ಯ ದಂಡ ಸಂಗ್ರಹ ಇಲ್ಲ
ದಂಡ ಸಂಗ್ರಹ ಮಾಡದಂತೆ ನಾಗರಿಕರು ಸರಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸದ್ಯ ದಂಡ ಸಂಗ್ರಹ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದರೆ ಅನರ್ಹ ಬಿಪಿಎಲ್‌ ಪತ್ತೆ ಕಾರ್ಯ ಮುಂದುವರಿದಿದ್ದು, ಜನವರಿ 21ರ ವರೆಗೆ 5,928 ಕಾರ್ಡ್‌ಗಳನ್ನು ಪತ್ತೆ ಹಚ್ಚಿ ಎಪಿಎಲ್‌ಗೆ ಬದಲಾಯಿಸಲಾಗಿದೆ. ಈ ಪೈಕಿ ಮಂಗಳೂರು ನಗರದಲ್ಲಿ 293, ಗ್ರಾಮಾಂತರದಲ್ಲಿ 798, ಬಂಟ್ವಾಳದಲ್ಲಿ 1,216, ಪುತ್ತೂರಿನಲ್ಲಿ 1,169, ಬೆಳ್ತಂಗಡಿಯಲ್ಲಿ 1,673, ಸುಳ್ಯದಲ್ಲಿ 661 ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಕೆಲವರು ಅವರಾಗಿಯೇ ಇಲಾಖೆಗೆ ಒಪ್ಪಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತೆ ಹಚ್ಚುವ ಕಾರ್ಯ
ಪ್ರಸ್ತುತ ಬಿಪಿಎಲ್‌ ಕಾರ್ಡ್‌ ಹೊಂದಿರುವ ಅನರ್ಹರು ಅವರಾಗಿಯೇ ಕಾರ್ಡ್‌ನ್ನು ಇಲಾಖೆಗೆ ಒಪ್ಪಿಸುತ್ತಿದ್ದಾರೆ. ಹೀಗಾಗಿ ದಂಡ ಸಂಗ್ರಹ ನಡೆಯುತ್ತಿಲ್ಲ. ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯ ನಿರಂತರವಾಗಿ ನಡೆಯಲಿದೆ.
 - ಡಾ| ಮಂಜುನಾಥನ್‌, ಜಂಟಿ ನಿರ್ದೇಶಕರು , ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next