ಜೈಪುರ: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳನ್ನು ಅಪಹರಣ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಶನಿವಾರ ರಾತ್ರಿ 9:30ರ ಸಮಯದಲ್ಲಿ ಕಾರಿನಲ್ಲಿ ಯೂಟ್ಯೂಬರ್ ಗಳಾದ ತರುಣ್, ಹರ್ಷ್ ಮತ್ತು ಹಿಮಾಂಶು ಜೊತೆಯಾಗಿ ಹೋಗುತ್ತಿದ್ದರು. ಈ ಮೂವರು ಯೂಟ್ಯೂಬ್ ನಲ್ಲಿ ಗೇಮಿಂಗ್ ಹಾಗೂ ಟ್ರೇಡಿಂಗ್ ಸಂಬಂಧಿತ ವಿಡಿಯೋಗಳನ್ನು ಮಾಡುತ್ತಿದ್ದರು. ಇದರಿಂದ ಇವರಿಗೆ ಒಳ್ಳೆಯ ಆದಾಯ ಬರುತ್ತಿತ್ತು.
ಈ ವಿಚಾರವನ್ನು ಅರಿತ ಅಪಹರಣಕಾರರು ಯೂಟ್ಯೂಬರ್ ಗಳು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾರೆ. ಎರಡು ಕಾರಿನಲ್ಲಿ ಬಂದ ಅಪಹರಣಕಾರರು ಕಾರಿನಿಂದ ಇಳಿದು ಕಾರಿನ ಮೇಲೆ ದಾಳಿ ಮಾಡಿ, ಶಸ್ತ್ರಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಕಾರಿನೊಳಗೆ ಕೂರಿಸಿಕೊಂಡು ಹೋಗಿದ್ದಾರೆ.
ಈ ಘಟನೆಯ ವಿಡಿಯೋ ಕಟ್ಟಡವೊಂದರಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಹರಣವಾದ 3 ಗಂಟೆಯಲ್ಲಿ ಪೊಲೀಸರು ಆರೋಪಿಗಳಾದ ವಿಕ್ರಮ್ ಸಿಂಗ್ ಮತ್ತು ರಿಷಬ್ ಚೌಧರಿಯನ್ನು ಬಂಧಿಸಿ, ಮೂವರು ಯೂಟ್ಯೂಬರ್ ಗಳನ್ನು ರಕ್ಷಿಸಿದ್ದಾರೆ.
ಆರೋಪಿಗಳು ಯೂಟ್ಯೂಬರ್ ಗಳನ್ನು ಬೆದರಿಸಿ ಅವರ ಖಾತೆಯಿಂದ ತಮ್ಮ ಖಾತೆಗೆ ಆನ್ ಲೈನ್ ಮೂಲಕ 3 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇತರೆ ಆರೋಪಿಗಳನ್ನು ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.