Advertisement

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

10:37 PM Jun 12, 2024 | Team Udayavani |

ಬೆಂಗಳೂರು: ರಾಜ್ಯದ ವಕೀಲ ಸಮುದಾಯದ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ವಕೀಲರ ರಕ್ಷಣೆಗೆ ಸಂಬಂಧಿಸಿದ “ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023′ ಜಾರಿಗೆ ಬಂದಿದೆ.

Advertisement

ಈ ಸಂಬಂಧ ರಾಜ್ಯ ಸರಕಾರ ಜೂನ್‌ 10ರಂದು ಗೆಜೆಟ್‌ ಅಧಿಸೂಚನೆ ಪ್ರಕಟಿಸಿದ್ದು, ಆ ದಿನದಿಂದಲೇ ಕಾಯ್ದೆ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಅದರಂತೆ, ಇನ್ನು ಮುಂದೆ ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಕಿರುಕುಳ ನೀಡುವುದು ನಿಷೇಧಿಸಲಾಗಿದ್ದು, ಒಂದೊಮ್ಮೆ ಇಂತಹ ಕೃತ್ಯಗಳು ನಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ.

ಯಾವುದೇ ವ್ಯಕ್ತಿಯು ನ್ಯಾಯವಾದಿಯ ಮೇಲೆ ಹಿಂಸಾಚಾರ ಕೃತ್ಯ ಎಸಗತಕ್ಕದಲ್ಲ. ಒಂದು ವೇಳೆ ಹಲ್ಲೆ, ಹಿಂಸಾಚಾರ ನಡೆಸಿದರೆ ಅಂತಹ ವ್ಯಕ್ತಿ 6 ತಿಂಗಳಿನಿಂದ 3 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ (ದಂಡ) ಭರಿಸಬೇಕಾ ಗುತ್ತದೆ. ಜೈಲುವಾಸ ಮತ್ತು ದಂಡ ಎರಡರಿಂದಲೂ ಶಿಕ್ಷಿತನಾಗ ಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

ಕಾಯ್ದೆಯ ಪ್ರಮುಖ ಅಂಶಗಳು
– ವಕೀಲರು ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪರಹಿತವಾಗಿ ತಮ್ಮ ಎಲ್ಲ ವೃತ್ತಿಪರ ಕಾರ್ಯ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗತಕ್ಕದ್ದು.
– ವಕೀಲರು ದೇಶ ಮತ್ತು ವಿದೇಶ ಎರಡರಲ್ಲಿಯೂ ಮುಕ್ತವಾಗಿ ಪ್ರಯಾಣಿಸಲು ಮತ್ತು ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಸಾಧ್ಯವಾಗಬೇಕು.
– ವಕೀಲರು ಮಾನ್ಯ ಮಾಡಿದ ವೃತ್ತಿಪರ ಕರ್ತವ್ಯಗಳು, ಮಾನಕಗಳು ಮತ್ತು ನೈತಿಕತೆಗಳ ಅನುಸಾರ ತೆಗೆದುಕೊಂಡ ಕ್ರಮಕ್ಕಾಗಿ ಅಭಿಯೋಜನೆ/ಆಡಳಿತಾತ್ಮಕ, ಆರ್ಥಿಕ ಅಥವಾ ಇತರ ನಿರ್ಬಂಧಗಳನ್ನು ಅನುಭವಿಸತಕ್ಕದ್ದಲ್ಲ ಅಥವಾ ಭಯಪಡತಕ್ಕದ್ದಲ್ಲ ಎಂಬುದನ್ನು ಸರಕಾರ ಖಚಿತಪಡಿಸಬೇಕು.
– ವಕೀಲರ ತಮ್ಮ ಕರ್ತವ್ಯ ನಿರ್ವಹಣೆ ಮಾಡುವಾಗ ಅವರ ಭದ್ರತೆಗೆ ಬೆದರಿಕೆ ಒಡ್ಡಿದಾಗ ಸಂಬಂಧಿಸಿದ ಪ್ರಾಧಿಕಾರಗಳು ಅವರನ್ನು ಸಂಪೂರ್ಣವಾಗಿ ಸಂರಕ್ಷಿಸುವುದು.
-ನ್ಯಾಯವಾದಿಗಳು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಮತ್ತು ಪ್ರಾಸಂಗಿಕವಾದ ವಿಷಯಗಳಿಗಾಗಿ ಅವರ ಮೇಲಿನ ಹಿಂಸೆಯನ್ನು ನಿಷೇಧಿಸಿ ಅವರಿಗೆ ರಕ್ಷಣೆ ನೀಡುವುದು ಕಾಯ್ದೆಯ ಮೂಲ ಉದ್ದೇಶ.

ಕಾಯ್ದೆ ರಚನೆಗೆ ಬಲವಾದ ಕೂಗು
2020ರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ದಿಲ್ಲಿ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಕಡೆ ವಕೀಲರ ಮೇಲೆ ಹಲ್ಲೆ ನಡೆದ ಘಟನೆಗಳು ವರದಿಯಾಗಿದ್ದವು. ಹಲ್ಲೆ , ದೌರ್ಜನ್ಯ ಹಾಗೂ ಕೊಲೆ ಹಿನ್ನೆಲೆಯಲ್ಲಿ ವಕೀಲರ ರಕ್ಷಣ ಕಾಯ್ದೆ ರೂಪುಗೊಳ್ಳಬೇಕು ಎಂಬ ಬಲವಾದ ಕೂಗು ವಕೀಲರ ಸಮುದಾಯದಲ್ಲಿ ಎದ್ದಿತ್ತು. ಬೆಂಗಳೂರು ವಕೀಲರ ಸಂಘ ಸೇರಿದಂತೆ ವಿವಿಧ ವಕೀಲ ಸಂಘಟನೆಗಳು ಈ ಕುರಿತು ಸರಕಾರಗಳ ಗಮನ ಸೆಳೆದು ಹೋರಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕರಡು ಮಸೂದೆ ರಚನೆಗೆ ನಿರ್ಧರಿಸಿದ್ದ ಬೆಂಗಳೂರು ವಕೀಲರ ಸಂಘ, ಹಿರಿಯ ವಕೀಲರಾದ ಉದಯ್‌ ಹೊಳ್ಳ, ಸಿ.ಎಚ್‌. ಹನುಮಂತರಾಯ, ಎ.ಎಸ್‌. ಪೊನ್ನಣ್ಣ ಮತ್ತು ಡಿ.ಆರ್‌. ರವಿಶಂಕರ್‌ ಅವರನ್ನು ಒಳಗೊಂಡ ಸಮಿತಿ ರಚಿಸಿತ್ತು. ಸಮಿತಿಯು 2021ರಲ್ಲಿ ಕರಡು ವಿಧೇಯಕ ರೂಪಿಸಿತ್ತು. ಅದನ್ನು ಅಂದಿನ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್‌ ನೇತೃತ್ವದಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಹೋರಾಟವನ್ನು ಹಾಲಿ ಅಧ್ಯಕ್ಷ ವಿವೇಕ ಸುಬ್ಟಾರೆಡ್ಡಿ ತೀವ್ರಗೊಳಿಸಿದರು. 2023ರಲ್ಲಿ ಮಸೂದೆ ಸಿದ್ದಪಡಿಸಿತ್ತು. 2023ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ದೊರಕಿತ್ತು. ಮಾರ್ಚ್‌ 20ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಇದೀಗ ಜೂ. 10ರಂದು ಕಾಯ್ದೆ ಜಾರಿಗೊಳಿಸಿ ಗೆಜೆಟ್‌ ಅಧಿಸೂಚನೆ ಪ್ರಕಟಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next