Advertisement

ಮುಚ್ಚಿದ ಶಾಲೆ ತೆರೆಯಿಸಲು ಗ್ರಾಮಸ್ಥರು ಉತ್ಸುಕರು

11:25 PM May 19, 2019 | Sriram |

ವಿಶೇಷ ವರದಿ-ಹೆಬ್ರಿ: ಮಕ್ಕಳಿಲ್ಲದ ಕಾರಣದಿಂದ ಮೂರು ವರ್ಷಗಳ ಹಿಂದೆ ಮುಚ್ಚಿದ ಹೆಬ್ರಿ ತಾಲೂಕು ನಾಡಾ³ಲು ಗ್ರಾಮದ ಮೇಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮರಳಿ ತೆರೆಯಲು ಗ್ರಾಮಸ್ಥರು ಉತ್ಸುಕರಾಗಿದ್ದಾರೆ. ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿ ಸಹಕರಿಸುವುದೇ ಎಂಬುದು ಈಗಿನ ಪ್ರಶ್ನೆ.

Advertisement

ಸುಮಾರು 40 ವರ್ಷಗಳ ಇತಿಹಾಸ ವಿರುವ ಶಾಲೆ ಮಕ್ಕಳಿಲ್ಲದೆ ಮುಚ್ಚಿತ್ತು. 1978ರಲ್ಲಿ ಆರಂಭವಾದ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿತ್ತು. ಸುತ್ತಮುತ್ತ 85 ಮನೆಗಳಿದ್ದು, ಈ ಶಾಲೆಯಿಂದ ಅನುಕೂಲವಾಗಿತ್ತು. ಮೂರು ವರ್ಷಗಳ ಹಿಂದೆ ಮಕ್ಕಳು ಕಡಿಮೆ ಎಂಬ ಕಾರಣಕ್ಕೆ ಶಾಲೆಯನ್ನು ಬಂದ್‌ ಮಾಡಲಾಗಿದೆ. ಈಗ ಮಕ್ಕಳು ದೂರದ ಊರಿನ ಶಾಲೆಯನ್ನು ಅವಲಂಬಿಸಬೇಕಾಗಿದೆ. ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬಸ್‌ ವ್ಯವಸ್ಥೆಯೂ ಇಲ್ಲ. ಮೊಬೈಲ್‌ ನೆಟ್‌ವರ್ಕ್‌ ಕೂಡ ಇಲ್ಲ. ನಕ್ಸಲ್‌ ಬಾಧಿತ ಪ್ರದೇಶವಾಗಿರುವುದರಿಂದ ಒಬ್ಬೊಬ್ಬರೇ ಓಡಾಡುವುದು ಕಷ್ಟ.

ಮನೆ ಮನೆ ಭೇಟಿ
ಮೊದಲಿನಿಂದಲೂ ಶಾಲೆಯ ಉಳಿವಿಗೆ ಹೋರಾಡುತ್ತಿರುವ ಗ್ರಾಮಸ್ಥರು ಈ ಬಾರಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಈ ಶಾಲೆಗೆ ಸೇರಿಸುವಂತೆ ಪ್ರೇರೇಪಿಸುತ್ತಿದ್ದಾರೆ. 15 ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗೆ ಸೇರಲು ತಯಾರಾಗಿದ್ದು, ಇಲಾಖೆಯ ಅನುಮತಿಗೆ ಎದುರು ನೋಡುತ್ತಿದ್ದಾರೆ.

ಶಾಲೆ ಅಗತ್ಯ
ಗ್ರಾಮೀಣ ಪ್ರದೇಶವಾದ ಮೇಗದ್ದೆಗೆ ಪ್ರಾಥಮಿಕ ಶಾಲೆಯ ಅಗತ್ಯ ಇದೆ. ಅದನ್ನು ಉಳಿಸಿಕೊಳ್ಳಲು ನಾವು ಸಾಕಷ್ಟು ಸಹಕಾರ ನೀಡಿದ್ದೇವೆ ಮತ್ತು ಹೋರಾಟ ನಡೆಸಿದ್ದೇವೆ. ಆದರೆ ಶಿಕ್ಷಕರ ಅನುಕೂಲಕ್ಕೆ ವಿದ್ಯಾರ್ಥಿಗಳು ಬಲಿಯಾಗಬೇಕಾಯಿತು ಎಂದು ಸ್ಥಳೀಯರು ಹೇಳುತ್ತಾರೆ. ಈ ಪರಿಸರದಲ್ಲಿ ತುಂಬಾ ಮಕ್ಕಳಿದ್ದು, ಮೇಗದ್ದೆಯಿಂದ ನೆಲ್ಲಿಕಟ್ಟೆ ವರೆಗೆ ಸುಮಾರು 7 ಕಿ.ಮೀ. ತನಕ ಬಸ್ಸಿನ ವ್ಯವಸ್ಥೆ ಇಲ್ಲ. ಆದ್ದರಿಂದ ಮುಚ್ಚಿರುವ ಸರಕಾರಿ ಶಾಲೆಯನ್ನು ಈ ವರ್ಷ ತೆರೆಯಬೇಕು ಎಂಬುದು ಅವರ ಆಗ್ರಹ.

ಮೂಲಸೌಕರ್ಯ
ಶಾಲೆಯ ವಠಾರದಲ್ಲಿ ಗೇರು ಮರ ಗಳಿದ್ದು, ಅದರ ಆದಾಯದಲ್ಲಿ ಶಾಲೆಗೆ ನೀರಿನ ಪೂರೈಕೆ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಊರಿನವರೂ ಸಹಕರಿಸಿದ್ದರು.

Advertisement

ಶಿಕ್ಷಕರೇ ಕಾರಣ?
ಮೇಗದ್ದೆಗೆ ಬಸ್‌ ಇಲ್ಲದಿರುವುದು ಮೊದಲಾದ ಸಮಸ್ಯೆಗಳಿಂದ ಬೇಸತ್ತ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ಬೇರೆ ಶಾಲೆಗಳಿಗೆ ಸೇರಿಸಲು ಹೇಳಿ ಅದಕ್ಕೆ ಬೇಕಾದ ಶಾಲಾ ವಾಹನ ಖರ್ಚನ್ನು ಭರಿಸುವುದಾಗಿ ಮನವೊಲಿಸಿ ಮಕ್ಕಳನ್ನು ಬೇರೆ ಈ ಶಾಲೆ ಬಿಡುವಂತೆ ಮಾಡಿದ್ದಾರೆ. ಹಾಗಾಗಿ ಶಾಲೆಯನ್ನು ಮುಚ್ಚಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಲೂ ಕೆಲವು ವಿದ್ಯಾರ್ಥಿಗಳ ಪ್ರತಿತಿಂಗಳ ಶಾಲಾ ವಾಹನ ಖರ್ಚನ್ನು ಶಿಕ್ಷಕರೇ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ಪುನರಾರಂಭಕ್ಕೆ ಪ್ರಯತ್ನ
ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ವಾಸ್ತವದ ಬಗ್ಗೆ ಮನಗಂಡು ತೀರ ಅಗತ್ಯವಾದರೆ ಖಂಡಿತವಾಗಿಯೂ ಶಾಲೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತೇನೆ.
-ಶಶಿಧರ್‌,
ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ

ಶಾಲೆ ಅಗತ್ಯವಿದೆ
ತೀರಾ ಗ್ರಾಮೀಣ ಪ್ರದೇಶವಾದ ಮೇಗದ್ದೆಗೆ ಸರಕಾರಿ ಶಾಲೆಯ ಅಗತ್ಯವಿದೆ. 40 ವರ್ಷಗಳ ಇತಿಹಾಸವಿರುವ ಶಾಲೆಯನ್ನು ಮುಚ್ಚಿರುವುದರಿಂದ ತೊಂದರೆಯಾಗಿದೆ. ಈ ಸಾಲಿನಲ್ಲಿ 15 ವಿದ್ಯಾರ್ಥಿಗಳು ಶಾಲೆಗೆ ಸೇರಲು ತಯಾರಿದ್ದು, ಇಲಾಖೆಯವರು ಈ ಭಾಗಕ್ಕೆ ಬಂದು ಪರಿಶೀಲನೆ ನಡೆಸಿದಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಪ್ರೇರೆಪಿಸಬಹುದು. ಇಲಾಖೆಯೊಂದಿಗೆ ನಮ್ಮ ಸಹಕಾರ ನಿರಂತರವಾಗಿದೆ.
-ರಮೇಶ್‌ ಮೇಗದ್ದೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next