ಭೋಪಾಲ್: ಚಾಕಲೆಟ್ ಮತ್ತು ಕ್ಯಾಂಡಿಯನ್ನು ಕಸಿದುಕೊಂಡ ಸಿಟ್ಟಿನಿಂದ 3 ವರ್ಷದ ಬಾಲಕ ಠಾಣೆಗೆ ಹೋಗಿ ಅಮ್ಮನ ವಿರುದ್ಧ ದೂರು ನೀಡಿದ್ದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಇದೀಗ ಪುಟಾಣಿಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ದೀಪಾವಳಿ ಉಡುಗೊರೆಯಾಗಿ ಪುಟ್ಟ ಸೈಕಲ್ ಆನ್ನು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ʼಕಾಶ್ಮೀರ ಪ್ರತ್ಯೇಕ ದೇಶʼವೆಂದು ಉಲ್ಲೇಖ: ಬಿಜೆಪಿ ಕಿಡಿ
ತನ್ನ ಚಾಕಲೆಟ್ ಅನ್ನು ತಾಯಿ ಕಸಿದುಕೊಂಡಿದ್ದಕ್ಕೆ ಕೋಪಗೊಂಡಿದ್ದ ಹಂಝಾ ಎಂಬ ಪುಟಾಣಿ ಬಾಲಕ ತಾನು ಮಮ್ಮಿ(ಅಮ್ಮ) ವಿರುದ್ಧ ದೂರು ನೀಡಬೇಕು, ಪೊಲೀಸ್ ಠಾಣೆಗೆ ಕರೆದೊಯ್ಯಬೇಕು ಎಂದು ಕೇಳಿಕೊಂಡಿದ್ದ. ನಂತರ ಆತನನ್ನು ಠಾಣೆಗೆ ಕರೆತಂದಾಗ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಪೇಪರ್ ನಲ್ಲಿ ಬಾಲಕನ ದೂರನ್ನು ದಾಖಲಿಸಿಕೊಂಡಿದ್ದು, ತಾಯಿಯ ಹೆಸರೇನು ಎಂದು ಪ್ರಶ್ನಿಸಿದಾಗ “ಮಮ್ಮಿ” ಅಂತ ಉತ್ತರಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ಕೊನೆಗೆ ಪೇಪರ್ ಪೀಸ್ ನಲ್ಲಿ ಸಹಿ ಹಾಕು ಎಂದಿದ್ದಕ್ಕೆ ಎರಡು ಗೆರೆ ಎಳೆದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಗೃಹ ಸಚಿವ ನರೋತ್ತಮ್ ಮಿಶ್ರಾ ಹಂಝಾ ಪೋಷಕರಿಗೆ ಕರೆ ಮಾಡಿ ಬಾಲಕನಜೊತೆ ಮಾತನಾಡಿ ದೀಪಾವಳಿ ಉಡುಗೊರೆಯಾಗಿ ಚಾಕಲೆಟ್ ಮತ್ತು ಸೈಕಲ್ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.
ಕೊಟ್ಟ ಮಾತಿನಂತೆ ಸಚಿವ ಮಿಶ್ರಾ ಅವರು ಇಂದು ಬಾಲಕನಿಗೆ ಚಾಕಲೆಟ್ ಮತ್ತು ಸೈಕಲ್ ಅನ್ನು ಕಳುಹಿಸಿಕೊಟ್ಟಿದ್ದು, ಹೊಸ ವಿಡಿಯೋದಲ್ಲಿ ಬಾಲಕ ಪುಟ್ಟ ಸೈಕಲ್ ಅನ್ನು ತುಳಿಯಲು ಪ್ರಯತ್ನಿಸುತ್ತಿರುವುದು ದಾಖಲಾಗಿದೆ.