ಸಿಂಗಾಪುರ್: ಕೋವಿಡ್ 19 ಮರಣಮೃದಂಗ ಜಗತ್ತಿನಾದ್ಯಂತ ಮುಂದುವರಿಸಿದೆ. ಕೇವಲ ಒಂದೇ ದಿನದಲ್ಲಿ ಭಾರತೀಯ ಮೂಲದ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ 73 ಮಂದಿಗೆ ಕೋವಿಡ್ 19 ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿದ್ದು, ಸಿಂಗಾಪುರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 631ಕ್ಕೆ ಏರಿದೆ.
ಸಿಂಗಾಪುರದಲ್ಲಿ ಕೋವಿಡ್ 19 ಮಹಾಮಾರಿ ಸೋಂಕು ತಗುಲಿದವರ ಸಂಖ್ಯೆ 631ಕ್ಕೆ ಏರಿದ್ದು, ಬುಧವಾರ ಒಂದೇ ದಿನ 73 ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಮಾಹಿತಿ ಪ್ರಕಾರ, ಇದರಲ್ಲಿ 38 ಮಂದಿ ಪ್ರಯಾಣ ವಿವರವನ್ನು ಬಹಿರಂಗಗೊಳಿಸಿದೆ. ಇವರು ಯುರೋಪ್, ಉತ್ತರ ಅಮೆರಿಕ, ಏಷಿಯನ್ ದೇಶಗಳಿಗೆ ಪ್ರವಾಸಕ್ಕೆ ತೆರಳಿ ವಾಪಸ್ಸಾಗಿದ್ದರು. ಉಳಿದವರು ಸ್ಥಳೀಯವಾಗಿಯೇ ಇದ್ದು ಸೋಂಕು ತಗುಲಿರುವುದಾಗಿ ತಿಳಿಸಿದೆ.
ಕಿಂಡರ್ ಗಾರ್ಟೆನ್ ಸೆಂಟರ್ (ಶಿಶುವಿಹಾರ) ಗೆ ಸಂಬಂಧಿಸಿದಂತೆ 18 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಕ್ಷದ ಪಿಸಿಎಫ್ ಸೆಂಟರ್ ನ ಎಲ್ಲಾ ಶಾಲೆಗಳನ್ನು ಗುರುವಾರದಿಂದ ನಾಲ್ಕು ದಿನಗಳ ಕಾಲ ಬಂದ್ ಮಾಡುವಂತೆ ಸೂಚಿಸಿರುವುದಾಗಿ ವರದಿ ವಿವರಿಸಿದೆ.
ಸ್ಥಳೀಯ ವರದಿ ಪ್ರಕಾರ, ಕಿಂಡರ್ ಗಾರ್ಟೆನ್ ನ 18 ಪ್ರಕರಣಗಳಲ್ಲಿ ಪ್ರಾಂಶುಪಾಲರು ಸೇರಿದಂತೆ 14 ಮಂದಿ ಸಿಬ್ಬಂದಿ ಹಾಗೂ ಉಳಿದ ನಾಲ್ವರು ಪ್ರಾಂಶುಪಾಲರ ಕುಟುಂಬದ ಸದಸ್ಯರು ಎಂದು ವರದಿ ತಿಳಿಸಿದೆ.
ಡೋವರ್ ಕೋರ್ಟ್ ಇಂಟರ್ ನ್ಯಾಶನಲ್ ಶಾಳೆಯ ಮೂವರು ಉದ್ಯೋಗಿಗಳಿಗೆ ಕೋವಿಡ್ 19 ಸೋಂಕು ತಗುಲಿದ್ದು, ಈ ಶಾಲೆಯನ್ನು ಕೋವಿಡ್ ಪೀಡಿತ ಎಂದು ಘೋಷಿಸಲಾಗಿದೆ.