ಸೋಪೋರೆ(ಜಮ್ಮು-ಕಾಶ್ಮೀರ): ಉಗ್ರರ ಜತೆಗಿನ ಎನ್ ಕೌಂಟರ್ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂದ ಮೂರು ವರ್ಷದ ಮಗುವನ್ನು ಜಮ್ಮು-ಕಾಶ್ಮೀರ್ ಪೊಲೀಸ್ ರಕ್ಷಿಸಿರುವ ಘಟನೆ ಸೋಪೋರೆ ಜಿಲ್ಲೆಯಲ್ಲಿ ನಡೆದಿದ್ದು, ಈ ಫೋಟೋ ಭಾರೀ ವೈರಲ್ ಆಗಿದೆ.
ವರದಿಯ ಪ್ರಕಾರ, ಸಿಆರ್ ಪಿಎಫ್ ಭದ್ರತಾ ಪಡೆ, ಪೊಲೀಸ್ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆಯುತ್ತಿತ್ತು.. ಈ ವೇಳೆ 3ವರ್ಷದ ಮಗುವೊಂದು ಬಂದಿದ್ದು ಆ ಹೊತ್ತಿಗೆ ಉಗ್ರರು ಗುಂಡು ಹಾರಿಸಿದ್ದರು. ಆದರೆ ಕ್ಷಿಪ್ರವಾಗಿ ಮಗುವನ್ನು ಜಮ್ಮು-ಕಾಶ್ಮೀರ್ ಪೊಲೀಸರೊಬ್ಬರು ರಕ್ಷಿಸಿರುವುದಾಗಿ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿರುವ ಫೋಟೋ ಎಲ್ಲರ ಮನಕಲಕುವಂತಿದೆ. ಎನ್ ಕೌಂಟರ್ ನಡೆಯುತ್ತಿದ್ದಾಗಲೇ ಓಡಿ ಬಂದ ಮಗುವನ್ನು ಜಮ್ಮು ಕಾಶ್ಮೀರ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಮಗುವನ್ನು ಗುಂಡಿನ ದಾಳಿಯಿಂದ ರಕ್ಷಿಸಿದಂತಾಗಿದೆ.
ಇಂದು ಬೆಳಗ್ಗೆ ನಾಕಾಬಂಧಿ ನಡೆಸುತ್ತಿದ್ದ ಸಿಆರ್ ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದರು. ಅಲ್ಲದೇ ನಾಗರಿಕರೊಬ್ಬರು ಗಾಯಗೊಂಡಿದ್ದರು.