ಹೈದರಾಬಾದ್: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಬುಧವಾರ 120 ಅಡಿ ಆಳದ ಕೊಳೆವೆ ಬಾವಿಗೆ ಈ ಮೂರು ವರ್ಷದ ಬಾಲಕ ಬಿದ್ದಿದ್ದ. ಕೊಳವೆ ಬಾವಿ ಸುತ್ತಲೂ ಮಣ್ಣು ಅಗೆದು, ಆಕ್ಸಿಜನ್ ಪೂರೈಕೆಯನ್ನು ಕೂಡ ಮಾಡಲಾಗಿತ್ತು. ಎನ್ ಡಿಆರ್ ಎಫ್ ತಂಡ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ 17 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನ ಮೃತದೇಹವನ್ನು ಹೊರಕ್ಕೆ ತಂದಿದೆ.
ದುರಂತವೆಂದರೇ ಬುಧವಾರ ಬಾಲಕ ಸುಮಾರು 5 ಗಂಟೆಯ ವೇಳೆಗೆ ಮೇಡಕ್ ಜಿಲ್ಲೆಯ ಪಾಪನ್ನಪೇಟೆ ಮಂಡಲದಲ್ಲಿ ತನ್ನ ತಂದೆ ಹಾಗೂ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿರುವಾಗಲೇ ಈ ದುರ್ಘಟನೆ ಸಂಭವಿಸಿತ್ತು. ಆರಂಭದಲ್ಲಿ ಬಾಲಕನ ಪೋಷಕರು ಸೀರೆ ಬಳಸಿ ರಕ್ಷಿಸಲು ಯತ್ನಿಸಿದರೂ ವ್ಯರ್ಥವಾಯಿತು ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈತರೋರ್ವರು ಕೃಷಿ ಚಟುವಟಿಕೆಗಾಗಿ 120 ಅಡಿ ಆಳದ 3 ಕೊಳವೆ ಬಾವಿ ಅಗೆಸಿದ್ದರು. ಆದರೆ ಯಾವುದರಲ್ಲೂ ಕೂಡ ನೀರು ಲಭ್ಯವಾಗಿರಲಿಲ್ಲ. ಆದರೇ ಅನುಮತಿಯಿಲ್ಲದೆ ಬೋರ್ ವೇಲ್ ಕೊರೆಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.