ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಯಲ್ಲಿ ಮೂವರು ಪಿಯುಸಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಡಿಸೆಂಬರ್ 31 ರಂದು ರಾತ್ರಿ ನಡೆದಿದೆ.
ನೀರು ಪಾಲಾದ ವಿದ್ಯಾರ್ಥಿಗಳು ಇಳಂತಿಲದ ಕಡವಿನ ಬಾಗಿಲಿನ ಫಿರ್ಯಾನ್, ನೆಲ್ಯಾಡಿಯ ಮೊಹಮದ್ ಸುನೈದ್ ಮತ್ತು ಪೆರ್ನೆಯ ಶಾಹಿರ್ ಎನ್ನುವವರಾಗಿದ್ದಾರೆ.
ಏನಿದು ಘಟನೆ ?
ಫಿರ್ಯಾನ್ ನ ಬರ್ತ್ ಡೇ ಪಾರ್ಟಿಗೆಂದು ಉಪ್ಪಿನಂಗಡಿ ಜ್ಯೂನಿಯರ್ ಕಾಲೇಜ್‌ನ ಒಟ್ಟು 18 ಮಂದಿ ವಿದ್ಯಾರ್ಥಿಗಳು ನೇತ್ರಾವತಿ ನದಿ ತೀರಕ್ಕೆಂದು ತೆರಳಿ ಕàಕ್ ಕತ್ತರಿಸಿ ಜನ್ಮದಿನಾಚರಣೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ಆ ಬಳಿಕ 15 ಮಂದಿ ವಾಪಸಾಗಿದ್ದಾರೆ.
ಫಿರ್ಯಾನ್ ಮುಖಕ್ಕೆ ಅಂಟಿಕೊಂಡಿದ್ದ ಕೇಕ್ ತೊಳೆಯಲೆಂದು ನದಿಗೆ ಇಳಿದಿದ್ದು, ಸನ್ಯಾಸಿ ಕಯಾ ಎನ್ನುವ ಅಂತ್ಯಂತ ಆಳದ ಗುಂಡಿಗೆ ಇಳಿದಿದ್ದು ನೀರು ಪಾಲಾಗಿದ್ದಾನೆ. ಜನ್ಮ ದಿನದಂದೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇನ್ನುಳಿದ ಇಬ್ಬರು ರಕ್ಷಣೆಗೆಂದು ತೆರಳಿ ನೀರು ಪಾಲಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ವಿದ್ಯಾರ್ಥಿಗಳು ಮನೆಗೆ ಮರಳಿರಲಿಲ್ಲ ಎಂದು ಆತಂಕ ಗೊಂಡ ಪೋಷಕರು ಹುಡುಕಾಟ ನಡೆಸಿದಾಗ ನೀರು ಪಾಲಾಗಿರುವುದು ತಿಳಿದು ಬಂದಿದೆ.
ಅಗ್ನಿ ಶಾಮಕ ದಳದ ಸಿಬಂದಿಗಳು , ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದು ಇಬ್ಬರ ಮೃತ ದೇಹ ಪತ್ತೆಯಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.