ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತ್ಯಾಗರಾಜನಗರದ ಸಾಯಿಬಾಬಾ ದೇವಾಲಯದ ಬಳಿ ಶನಿವಾರ ಸಂಭವಿಸಿದೆ. ಶಿವಮೊಗ್ಗ ಮೂಲದ ಸೋಹೆಲ್ (24) ಮೃತ ಕಾರ್ಮಿಕ.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಸೋಹೆಲ್ ಕಟ್ಟಡದ ಪಕ್ಕದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ 3 ಅಂತಸ್ತಿನ ಕಟ್ಟಡ ಕುಸಿದಿದ್ದು, ಅವಶೇಷಗಳಡಿ ಸಿಲುಕಿದ್ದ ಸೋಹೆಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ದೀಪಾವಳಿ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣದ ಇತರೆ ಕಾರ್ಮಿಕರು ಊರಿಗೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕುಮಾರ್ ಹಾಗೂ ಇತರರು ಬಿಲ್ಡ್ ಬೆಂಗಳೂರು ಇನಾ ಪ್ರಾಜೆಕ್ಟ್ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದಾರೆ. ಕಳೆದ ಒಂದು ವರ್ಷಗಳಿಂದ ತ್ಯಾಗರಾಜನಗರದ ಸಾಯಿಬಾಬಾ ದೇವಾಲಯ ಬಳಿಯಿರುವ 30/50 ಚದರ ಅಡಿಯ ಜಾಗದಲ್ಲಿ 3 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ಶೇ.90 ಕಾಮಗಾರಿ ಪೂರ್ಣಗೊಂಡಿದೆ.
ಕೆಲಸಕ್ಕೆ ಬಂದ ದಿನವೇ ಸಾವು: ಈ ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲೇ ಕಾರ್ತಿಕ್ ಎಂಬುವವರು ನಿವೇಶನ ಹೊಂದಿದ್ದು, ಮನೆ ನಿರ್ಮಿಸಲು 9 ಅಡಿ ಪಾಯ ತೆಗೆದಿದ್ದರು. ಹೀಗಾಗಿ ಮನೆ ನಿರ್ಮಾಣದ ಕಬ್ಬಿಣದ ವಸ್ತುಗಳನ್ನು ವೆಲ್ಡಿಂಗ್ ಮಾಡಲು ಶನಿವಾರ ಸೋಹೆಲ್ ಮತ್ತು ಈತನ ಸ್ನೇಹಿತ ಸಫೇರ್ ಬಂದಿದ್ದಾರೆ. 5 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಸಫೇರ್ ವೆಲ್ಡಿಂಗ್ ಮಷಿನನ್ನು ನಿವೇಶನದ ಹಿಂಭಾಗ ಕೊಂಡೊಯ್ಯುವಾಗ ಪಕ್ಕದಲ್ಲಿದ್ದ ಕಟ್ಟಡ ಕುಸಿದಿದ್ದು, ಇದನ್ನು ಕಂಡ ಸಫೇರ್ ಆತಂಕಗೊಂಡು ಓಡಿಹೋಗಿದ್ದಾನೆ.
ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ ಪರಿಶೀಲಿಸಿದರೂ ಆರಂಭದಲ್ಲಿ ಯಾರು ಕಂಡು ಬರಲಿಲ್ಲ. ಬಳಿಕ ಸಫೇರ್ ತನ್ನ ಸ್ನೇಹಿತ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಹೆಲ್ ಮೃತದೇಹ ಹೊರ ತೆಗೆದರು.
ಮಾಲೀಕರಿಂದಲೇ ಪರಿಹಾರ: ಕಟ್ಟಡ ಕುಸಿತದಿಂದ ಮೃತಪಟ್ಟ ಭದ್ರತಾ ಸಿಬ್ಬಂದಿ ಸೋಹೆಲ್‌ಗೆ ಪಾಲಿಕೆಯಿಂದ ಪರಿಹಾರ ನೀಡುವುದಿಲ್ಲ. ಬದಲಿಗೆ ನಿವೇಶನ ಮಾಲಿಕರಿಂದಲೇ ಪರಿಹಾರ ಕೊಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು. 3 ಅಂತಸ್ತಿನ ಕಟ್ಟಡ ಕುಸಿದಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಮೇಯರ್, ಕುಸಿದ ಕಟ್ಟಡ ಪಕ್ಕದ ನಿವೇಶನವನ್ನು ಜೆಸಿಬಿಯಿಂದ ಅಗೆಯಲಾಗಿದೆ.
ಜತೆಗೆ ಪಾಲಿಕೆಯಿಂದ ಪಡೆದಿರುವ ಅನುಮತಿಗಿಂತ ಹೆಚ್ಚು ಆಳ ಅಗೆದಿರುವ ಹಿನ್ನೆಲೆಯಲ್ಲಿ ಕಟ್ಟಡ ಕುಸಿತದಿರುವ ಸಾಧ್ಯತೆಯಿದೆ ಎಂದರು. ಹೆಚ್ಚು ಆಳಕ್ಕೆ ಮಣ್ಣು ಅಗೆದಿರುವುದು ಘಟನೆಗೆ ಕಾರಣವೇನ್ನಲಾಗಿದ್ದು, ನಿವೇಶನ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.