ಬೆಂಗಳೂರು: ಅತ್ಯಂತ ದುಃಸ್ಥಿತಿಯಲ್ಲಿರುವ ಬಾಗಲಕೋಟೆ ಜಿಲ್ಲೆಯ ಐಹೊಳೆಯಲ್ಲಿರುವ ಮೂರು ದೇವಸ್ಥಾನಗಳ ಸಂಕೀರ್ಣ ಮತ್ತು ಐದು ಸ್ಮಾರಕಗಳ ರಕ್ಷಣೆ ಜತೆಗೆ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಮುಂದಾಗಿದ್ದು, ಈ ಸಂಬಂಧ ಟ್ರಸ್ಟ್ ಹಾಗೂ ರಾಜ್ಯ ಪುರಾತತ್ವ ಇಲಾಖೆ ಹಾಗೂ ಚಾಲುಕ್ಯ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಯಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಸಮ್ಮುಖದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿದರು.
ಅದರಂತೆ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಹತ್ತು ಕೋಟಿ ರೂ. ವೆಚ್ಚದಲ್ಲಿ ಐಹೊಳೆಯಲ್ಲಿರುವ ಮೂರು ದೇವಸ್ಥಾನಗಳ ಸಂಕೀರ್ಣ ಮತ್ತು ಐದು ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಐದು ಕೋಟಿ ರೂ. ವಿನಿಯೋಗಿಸಲು ಮುಂದೆ ಬಂದಿದೆ. ಒಪ್ಪಂದಕ್ಕೆ ಸಹಿ ಹಾಕಿದ ಅನಂತರ ಡಾ| ಹೆಗ್ಗಡೆ ಮಾತನಾಡಿ, ಸರಕಾರ ನಮ್ಮ ಮೇಲೆ ನಂಬಿಕೆ ಇಟ್ಟು ಈ ದೇವಸ್ಥಾನಗಳು ಮತ್ತು ಸ್ಮಾರಕಗಳ ಜೀರ್ಣೋದ್ಧಾರದ ಜವಾಬ್ದಾರಿ ವಹಿಸಿದೆ. ನಿಗದಿತ ಅವಧಿಯಲ್ಲಿ ಈ ಕೆಲಸ ಮಾಡಿ ಮುಗಿಸಬೇಕು ಅಂದುಕೊಂಡಿದ್ದೇವೆ ಎಂದು ಹೇಳಿದರು.
262 ದೇಗುಲ ಪೂರ್ಣ
1991ರಿಂದ ಇದುವರೆಗೆ ಧರ್ಮಸ್ಥಳವು ರಾಜ್ಯದ ಸುಮಾರು 282 ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿದ್ದು, ಈ ಪೈಕಿ 262 ಪೂರ್ಣಗೊಂಡಿವೆ. ಇದರಲ್ಲಿ ಸರಕಾರ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ತಲಾ ಶೇ. 40ರಷ್ಟು ವೆಚ್ಚ ವಿನಿಯೋಗಿಸಿದರೆ, ಉಳಿದ ಶೇ. 20ರಷ್ಟನ್ನು ಆಯಾ ಊರಿನವರಿಂದ ಸಂಗ್ರಹಿಸಿ ಅಭಿವೃದ್ಧಿಪಡಿಸಲಾಗಿದೆ. ಈಗ ಅವೆಲ್ಲವೂ ದೇವಾಲಯಗಳಾಗಿ ಭಕ್ತರನ್ನು ಸೆಳೆಯುತ್ತಿವೆ. ಐಹೊಳೆ ದೇವಸ್ಥಾನಗಳು ಕೂಡ ಮುಂಬರುವ ದಿನಗಳಲ್ಲಿ ಜೀವಂತ ದೇವಾಲಯಗಳಾಗಿ ಉಸಿರಾಡಲಿವೆ ಎಂದು ಹೇಳಿದರು.