ಶಾದೋಲ್(ಮಧ್ಯಪ್ರದೇಶ):ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹಸುಳೆಗೆ ಚಿಕಿತ್ಸೆಯ ರೂಪದಲ್ಲಿ ಕಾದ ಕಬ್ಬಿಣದ ರಾಡ್ ನಿಂದ 51 ಬಾರಿ ಹೊಟ್ಟೆಗೆ ಚುಚ್ಚಿದ್ದ ಪರಿಣಾಮ ತೀವ್ರ ಉಸಿರಾಟದ ತೊಂದರೆಗೆ ಸಿಲುಕಿ 15 ದಿನಗಳ ಬಳಿಕ ಆಸ್ಪತ್ರೆಯಲ್ಲಿ ದುರಂತ ಅಂತ್ಯ ಕಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಾದೋಲ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಹಿಟ್ & ರನ್’ಗೆ ಇಬ್ಬರ ಬಲಿ ಪ್ರಕರಣ! ‘ಮ್ಯಾಡ್ ಇನ್ ಕುಡ್ಲ’ ಕಾಮಿಡಿಯನ್ ಅರ್ಪಿತ್ ಬಂಧನ
ಬುಡಕಟ್ಟು ಪ್ರಾಬಲ್ಯ ಹೊಂದಿರುವ ಶಾದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಶವವನ್ನು ಹೂತಿದ್ದು, ಇದೀಗ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರತೆಗೆಯಲಾಗಿದೆ ಎಂದು ವರದಿ ವಿವರಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕುರುಡು ಮೂಢನಂಬಿಕೆಯ ಕರಾಳತೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ. ಮಗುವಿಗೆ ನ್ಯೂಮೋನಿಯಾಗೆ ಚಿಕಿತ್ಸೆ ನೀಡದೆ, ಕಾದ ಕಬ್ಬಿಣದ ಸರಳನ್ನು ಹೊಟ್ಟೆಗೆ ಚುಚ್ಚುವ ಮೂಲಕ ಮಗುವಿನ ಸ್ಥಿತಿ ಚಿಂತಾಜನಕವಾಗಲು ಕಾರಣವಾಗಿತ್ತು ಎಂದು ಶಾದೋಲ್ ಜಿಲ್ಲಾಧಿಕಾರಿ ವಂದನಾ ವೈಧ್ ತಿಳಿಸಿದ್ದಾರೆ.
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮಗುವಿಗೆ ಕಾದ ಕಬ್ಬಿಣದ ಸರಳಿನಿಂದ ಚುಚ್ಚಬೇಡಿ ಎಂದು ತಾಯಿಗೆ ತಿಳಿ ಹೇಳಿದ್ದರೂ ಎಂದು ವೈಧ್ ತಿಳಿಸಿದ್ದಾರೆ. ಬುಡಕಟ್ಟು ಜನರು ವಾಸವಾಗಿರುವ ಈ ಪ್ರದೇಶದಲ್ಲಿ ನ್ಯೂಮೋನಿಯಾಕ್ಕೆ ಕಾದ ಕಬ್ಬಿಣದ ಸರಳನ್ನು ಚುಚ್ಚುವುದು ಸಾಮಾನ್ಯ ರೂಢಿಯಾಗಿದೆ ಎಂದು ವರದಿ ವಿವರಿಸಿದೆ.