ಮುಂಬೈ:ಮಕ್ಕಳನ್ನು ಅಪಹರಿಸಿ ಕಿಡ್ನಿ ಸೇರಿದಂತೆ ಇತರೆ ಅಂಗಾಂಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಬಂದಿದ್ದಾರೆ ಎಂಬ ಊಹಾಪೋಹಕ್ಕೆ 70 ವರ್ಷದ ಮುದುಕು ಸೇರಿದಂತೆ ಮೂವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮುಂಬೈನಿಂದ 125 ಕಿಲೋ ಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ಪಾಲ್ಗಾಢ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಗುರುವಾರ ರಾತ್ರಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಡ್ ಚಿಂಚಾಲೆ ಗ್ರಾಮದ ಉದ್ರಿಕ್ತ ಗ್ರಾಮಸ್ಥರು ಕಬ್ಬಿಣದ ಸಲಾಕೆ, ದೊಣ್ಣೆ, ಕಲ್ಲು ದೊಣ್ಣೆಗಳಿಂದ 70ವರ್ಷದ ಮುದುಕ ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಅವರನ್ನು ತಪ್ಪಿಸಲು ಯತ್ನಿಸಿದ ಪೊಲೀಸ್ ತಂಡದ ಮೇಲೂ ದಾಳಿ ನಡೆಸಿದ್ದರು. ಸಾವನ್ನಪ್ಪಿದವರಲ್ಲಿ ಇಬ್ಬರು ಸಾಧುಗಳಾಗಿದ್ದು, ಮೂರನೇ ವ್ಯಕ್ತಿ ಕಾರಿನ ಚಾಲಕ ಎಂದು ವರದಿ ವಿವರಿಸಿದೆ.
ಮತ್ತೊಂದು ವಿಡಿಯೋದಲ್ಲಿ, ಹೊಡೆಯುತ್ತಿದ್ದ ವ್ಯಕ್ತಿಯೊಬ್ಬ ಹಲೋ ಇವರಿಗೆ ಹೊಡೆಯಿರಿ ಎಂದು ಬೊಬ್ಬೆ ಹೊಡೆಯುತ್ತಿದ್ದ. ಇದರಲ್ಲಿ 70 ವರ್ಷದ ಮುದುಕ ಬಿಟ್ಟು ಬಿಡುವಂತೆ ಗೋಗರೆಯುತ್ತಿದ್ದ ದೃಶ್ಯ ಕೂಡಾ ಸೆರೆಯಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವುದು ವಿಡಿಯೋದಲ್ಲಿದೆ ಎಂದು ವರದಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ತಲುಪಿದ ನಂತರ ಮೂವರು ಸಂತ್ರಸ್ತರನ್ನು ಪೊಲೀಸ್ ಜೀಪ್ ನಲ್ಲಿ ಕುಳ್ಳಿರಿಸಿದ್ದರು. ಆದರೆ ಆಕ್ರೋಶಗೊಂಡ ಗುಂಪು ಮತ್ತೆ ಮೂವರನ್ನು ಹೊರಗೆಳೆದು ಹಲ್ಲೆ ನಡೆಸಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು. ಆದರೂ ಅವರನ್ನೆಲ್ಲಾ ಆಸ್ಪತ್ರೆಗೆ ಕರೆದೊಯ್ದರು ಕೂಡಾ ಅಷ್ಟರಲ್ಲಿಯೇ ಪ್ರಾಣ ಹೋಗಿರುವುದಾಗಿ ವೈದ್ಯರು ತಿಳಿಸಿದ್ದರು.ಪ್ರಕರಣದ ಬಗ್ಗೆ ತನಿಖೆ ನಡೆಸಿ 110 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ ತಿಳಿಸಿದ್ದಾರೆ.
ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಯಾವ ಊಹಾಪೋಹವನ್ನು ನಂಬಬೇಡಿ. ಯಾರೊಬ್ಬರೂ ನಿಮ್ಮ ಮಕ್ಕಳ ಕಿಡ್ನಿ ಕದಿಯಲು ಹಳ್ಳಿಗೆ ಬಂದಿಲ್ಲ. ಗ್ರಾಮಸ್ಥರು ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದು, ನಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕೈಲಾಶ್ ಶಿಂಧೆ ತಿಳಿಸಿದ್ದಾರೆ.