ಗದಗ: ಕಾರು ಪಲ್ಟಿಯಾಗಿದ್ದರಿಂದ ತಾಯಿ, ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಕುಂಡಿ ಹೊರವಲಯದ ಬೂದಿ ಬಸವೇಶ್ವರ ದೇವಸ್ಥಾನದ ಬಳಿ ಸೋಮವಾರ ಸಂಜೆ ಸಂಭವಿಸಿದೆ.
ಮೃತರನ್ನು ಕೊಪ್ಪಳದ ಪೂರ್ಣಿಮಾ ಶಿವಕುಮಾರ ಹಕ್ಕಾಪಕ್ಕಿ (45), ಅವರ ತಾಯಿ ಗಂಗಾವತಿಯ ಪ್ರಮೀಳಾ ಮಲ್ಲಿಕಾರ್ಜುನ ಮಸ್ಕಿ(70), ಅವಳಿ ಮಕ್ಕಳ ಪೈಕಿ 17 ತಿಂಗಳ ಗಂಡು ಮಗು ಆರ್ಯ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಶಿವಕುಮಾರ ಹಕ್ಕಾಪಕ್ಕಿ, ಅವರ 17 ತಿಂಗಳ ಪುತ್ರಿ ಆದ್ಯ ಗಾಯಗೊಂಡಿದ್ದು, ಮಲ್ಲಿಕಾರ್ಜುನ ಮಸ್ಕಿ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಕುಮಾರ ಹಕ್ಕಾಪಕ್ಕಿ ಅವರು ಕಾರು ಚಾಲನೆ ಮಾಡುತ್ತಿದ್ದು, ಅತೀ ವೇಗದಿಂದ ಚಲಾಯಿಸಿರುವುದು ಅಪಘಾತಕ್ಕೆ ಕಾರಣ ಎಂದು ಎಸ್ಪಿ ಯತೀಶ್ ಎನ್. ಮಹಿತಿ ನೀಡಿದರು.
ವಿಶ್ವ ಹಿಂದು ಪರಿಷತ್‌ನ ಕೊಪ್ಪಳ ಜಿಲ್ಲಾ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾದರೂ, ಮಕ್ಕಳಗಾಗಿರಲಿಲ್ಲ. ಹೀಗಾಗಿ ಧಾರವಾಡ ಜಿಲ್ಲೆಯ ನವಲಗುಂದದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಹೊತ್ತಿದ್ದರು. ಅದರಂತೆ ಒಂದೂವರೆ ವರ್ಷದ ನಂತರ ಮಕ್ಕಳಾದ ಸಂತಸದಲ್ಲಿದ್ದ ಹಕ್ಕಾಪಕ್ಕಿ ಅವರು, ಕುಟುಂಬ ಸಮೇತರಾಗಿ ಹೋಳಿ ಹುಣ್ಣಿಮೆ ನಿಮಿತ್ತ ರಾಮಲಿಂಗ ಹೋಳಿ ಕಾಮಣ್ಣನ ದರ್ಶನ ಪಡೆದು, ಕೊಪ್ಪಳಕ್ಕೆ ಹಿಂದಿರುಗುತ್ತಿದ್ದರು. ಈ ನಡುವೆ ಲಕ್ಕುಂಡಿ ಬಳಿ ಕಾರಿನ ಚೆಸ್ಸಿ ತುಂಡಾಗಿ ಭೀಕರ ಅಪಘಾತ ಸಂಭವಿಸಿದೆ. ಗಾಳಿಯಲ್ಲೇ ಸುಮಾರು 10 ಬಾರಿ ಪಲ್ಟಿಯಾಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಗದಗ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.